ಹನೂರು: ಪ್ರಾಧಿಕಾರ ವತಿಯಿಂದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಸೇವೆಗೆ ನೀಡಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಸೂಚಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡಿರುವ ಕ್ಯೂಲೈನ್ ಕಾಮಗಾರಿ, ಶೌಚಗೃಹ ಹಾಗೂ ಕೂಡು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಪರಿಶೀಲಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮ.ಬೆಟ್ಟಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಭಕ್ತರು ಸುಸೂತ್ರವಾಗಿ ದೇವರ ದರ್ಶನ ಪಡೆಯಲು ಕೈಗೊಂಡಿರುವ ಸರತಿ ಸಾಲಿನ ಸಂಕೀರ್ಣ ಕಾಮಗಾರಿಯ ಬಗ್ಗೆ ಹೆಚ್ಚಿನ ಮುತುರ್ವಜಿ ವಹಿಸಿ ಶೀಘ್ರ ಪೂರ್ಣಗೊಳಿಸಬೇಕು. ಶ್ರೀ ಕ್ಷೇತ್ರದಲ್ಲಿನ ಶೌಚಗೃಹಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ನಿರ್ವಹಣೆ ಸಮರ್ಪಕವಾಗಿರಬೇಕು. ಇನ್ನು 9.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕೂಡು ರಸ್ತೆಗಳ ಅಬಿವೃದ್ಧಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಜೆ.ಎಲ್ ಚಂದ್ರಶೇಖರ್, ಪಿಡಬ್ಲ್ಯುಡಿ ಎಇಇ ಚಿನ್ನಣ್ಣ, ಪ್ರಾಧಿಕಾರದ ಇಂಜಿನಿಯರ್ ಸೆಲ್ವ ಗಣಪತಿ ಇತರರು ಇದ್ದರು.