ಯಳಂದೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು

ಯಳಂದೂರು ಪಟ್ಟಣದ ರಸ್ತೆ ಬದಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಆರೋಗ್ಯಾಧಿಕಾರಿ ರಾಘವೇಂದ್ರ ಇತರರು ಇದ್ದರು.
ಯಳಂದೂರು ಪಟ್ಟಣದ ರಸ್ತೆ ಬದಿಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಆರೋಗ್ಯಾಧಿಕಾರಿ ರಾಘವೇಂದ್ರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಯಾಚರಣೆ ಆರಂಭಿಸಿದ ಪಪಂ
  • ಅಧಿಕಾರಿಗಳೊಂದಿಗೆ ಕೆಲ ಅಂಗಡಿ ಮಾಲೀಕರ ವಾಗ್ವಾದ

ಯಳಂದೂರು:

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸೋಮವಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಫುಟ್‌ಪಾತ್ ಒತ್ತುವರಿ ತೆರೆವು ಕಾರ್ಯಾಚರಣೆ ಆರಂಭಿಸಿದರು.

ಪಟ್ಟಣದ ನಾಡಮೇಗಲಮ್ಮ ದೇಗುಲದ ಬಳಿಯಿಂದ ಕಾರ್ಯಾಚರಣೆ ನಡೆಸಲಾಯಿತು. ಫುಟ್‌ಪಾತ್ ಹಾಗೂ ಚರಂಡಿ ಮೇಲೆ ಅಂಗಡಿ ಮಾಲೀಕರು ಹಾಕಿಕೊಂಡಿದ್ದ ವಸ್ತುಗಳನ್ನು ಹಾಗೂ ಶೀಟ್‌ಗಳನ್ನು ತೆರವು ಮಾಡಲಾಯಿತು. ಈ ಸಂದರ್ಭ ಕೆಲ ಅಂಗಡಿ ಮಾಲೀಕರು ಏಕಾಏಕಿ ತಮ್ಮ ಆಸ್ತಿಗಳಿಗೆ ಜೆಸಿಬಿ ಯಂತ್ರದ ಮೂಲಕ ಹಾನಿ ಮಾಡುತ್ತಿರುವುದನ್ನು ಖಂಡಿಸಿ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಅಂಗಡಿಗಳ ಜಾಹೀರಾತು ಫಲಕಗಳು, ಪಟ್ಟಣದ ಗಾಂಧಿ ಸರ್ಕಲ್‌ನಲ್ಲಿದ್ದ ತಳ್ಳುವ ಗಾಡಿಗಳು, ಹೂ, ಹಣ್ಣಿನ ಅಂಗಡಿ, ತಳ್ಳುವ ಗಾಡಿಯ ಹೋಟೆಲ್‌ಗಳನ್ನು ತೆರವುಗೊಳಿಸಲಾಯಿತು.
ಕೆಲವರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ತೆರವು ಮಾಡಿಕೊಟ್ಟರು. ಪಟ್ಟಣದ ಕೆ.ಕೆ.ರಸ್ತೆ, ದೊಡ್ಡ ಅಂಗಡಿ ಬೀದಿ, ಬಳೆಪೇಟೆಗೂ ತೆರಳಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಹಾಗೂ ಪೌರಕಾರ್ಮಿಕ ಸಿಬ್ಬಂದಿಯಿಂದ ತೆರವು ಮಾಡಿಸಿದರು.
ಪಟ್ಟಣದ ಎಸ್‌ಬಿಐ ಮುಂಭಾಗ ಇರುವ ಹಣ ಕೊಟ್ಟಿಸಿಕೊಳ್ಳುವ ಕೌಂಟರ್ ಚರಂಡಿ ಮೇಲಿದೆ. ಬ್ಯಾಂಕ್‌ನ ಜನರೇಟರ್ ಕೂಡ ತೆರವುಗೊಳಿಸಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಯಿತು.
ಪ.ಪಂ. ಮುಖ್ಯಾಧಿಕಾರಿ ಎಂ.ಪಿ.ಮಹೇಶ್ ಕುಮಾರ್ ಮಾತನಾಡಿ, ನ್ಯಾಯಾಲಯದ ಆದೇಶದಂತೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ. ಈಗಾಗಲೇ ಅನೇಕ ಬಾರಿ ಸೂಚನೆ ನೀಡಿದ್ದೇವೆ, ಕೆಲವರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದಾರೆ. ಪೂರ್ಣಗೊಳ್ಳುವವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದರು.
ಪಾದಚಾರಿ ಮಾರ್ಗಗಳ ತೆರವಿನಿಂದ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುತ್ತದೆ. ಜನರು ಹಾಗೂ ವ್ಯಾಪಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು. ಪ.ಪಂ.ಆರೋಗ್ಯಾಧಿಕಾರಿ ರಾಘವೇಂದ್ರ, ಸಿಬ್ಬಂದಿ ಮಲ್ಲಿಕಾರ್ಜುನ, ರಘು, ಅರವಿಂದ್ ಹಾಗೂ ಪೌರಕಾರ್ಮಿಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net