ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಕಿಲಗೆರೆ ಗೇಟ್ ಬಳಿ ಆಲಂಬೂರು ಏತನೀರಾವರಿ ಯೋಜನೆಯ ಮೂರು ಹಾಗೂ ನಾಲ್ಕನೇ ಹಂತದ ಅಚ್ಚುಕಟ್ಟು ಪ್ರದೇಶದ ರೈತರು ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಮನವಿ ಮಾಡಿದರು. ಕೆ.ಎಸ್.ಮಹೇಶ್, ಸಂಪತ್ತು, ಶ್ರೀಕಂಠಪ್ಪ, ಸಿದ್ದಮಲ್ಲಪ್ಪ, ನಾಗಭೂಷಣ, ಮಹದೇವಸ್ವಾಮಿ, ಮಂಜುನಾಥ್ ಇದ್ದರು.
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಕಿಲಗೆರೆ ಗೇಟ್ ಬಳಿ ಆಲಂಬೂರು ಏತನೀರಾವರಿ ಯೋಜನೆಯ ಮೂರು ಹಾಗೂ ನಾಲ್ಕನೇ ಹಂತದ ಅಚ್ಚುಕಟ್ಟು ಪ್ರದೇಶದ ರೈತರು ಜಿಲ್ಲಾಧಿಕಾರಿ ಶ್ರೀರೂಪಾ ಅವರಿಗೆ ಮನವಿ ಮಾಡಿದರು. ಕೆ.ಎಸ್.ಮಹೇಶ್, ಸಂಪತ್ತು, ಶ್ರೀಕಂಠಪ್ಪ, ಸಿದ್ದಮಲ್ಲಪ್ಪ, ನಾಗಭೂಷಣ, ಮಹದೇವಸ್ವಾಮಿ, ಮಂಜುನಾಥ್ ಇದ್ದರು.
Published on
ಗುಂಡ್ಲುಪೇಟೆ : ಆಲಂಬೂರು ಏತ ನೀರಾವರಿ ಯೋಜನೆಯ ಮೂರು ಹಾಗೂ ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸುವಂತೆ ಅಚ್ಚುಕಟ್ಟು ಪ್ರದೇಶದ ರೈತರು ಜಿಲ್ಲಾಧಿಕಾರಿ ಶ್ರೀರೂಪಾ ಅವರನ್ನು ಒತ್ತಾಯಿಸಿದರು.
ಯೋಜನೆಯ ತಮ್ಮಡಹಳ್ಳಿ, ಶ್ಯಾನಾಡ್ರಹಳ್ಳಿ ಕೆರೆಗಳ ವೀಕ್ಷಣೆ ನಂತರ ತೆರಕಣಾಂಬಿ ಸಮೀಪದ ಕಿಲಗೆರೆ ಗೇಟ್‌ಗೆ ಶುಕ್ರವಾರ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಅಚ್ಚುಕಟ್ಟು ಪ್ರದೇಶದ ಕಿಲಗೆರೆ, ಕೊತ್ತಲವಾಡಿ, ಯರಗನಹಳ್ಳಿ, ಕುಂದಕೆರೆ ಗ್ರಾಮಗಳ ರೈತ ಮುಖಂಡರು ಸ್ವಾಗತಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಕಿಲಗೆರೆ ಗ್ರಾಮದ ಮುಖಂಡ ಶ್ರೀಕಂಠಪ್ಪ ಮಾತನಾಡಿ, ಯೋಜನೆ ಆರಂಭವಾದಾಗಿನಿಂದಲೂ ನಿಗಮದ ಅಧಿಕಾರಿಗಳು ಮೂರು ಹಾಗೂ ನಾಲ್ಕನೇ ಹಂತದ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ನೀರು ಹರಿಸದೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಪ್ರತಿವರ್ಷವೂ ಮನವಿ ಸಲ್ಲಿಸುವ ಜತೆಗೆ ಪರಿಪರಿಯಾಗಿ ಬೇಡಿದರೂ ನೀರುಬಿಡುತ್ತಿಲ್ಲ. ಪ್ರತಿ ಬಾರಿಯೂ ಹೋರಾಟ ಮಾಡುವ ಮೂಲಕ ನೀರು ಪಡೆದುಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು ಮಾತನಾಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಯ ಉದ್ದೇಶ ಈಡೇರುತ್ತಿಲ್ಲ. ಒಮ್ಮೆ ಮೋಟಾರು ಸ್ಟಾರ್ಟ್ ಮಾಡಿದರೆ ಕೆರೆಗಳನ್ನು ತುಂಬಿಸುವ ಬದಲು ರಾತ್ರಿ ವೇಳೆ ಬಂದ್ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಹಂತದ ಕೆರೆಗಳೂ ತುಂಬುತ್ತಿಲ್ಲ. ಅಲ್ಲದೆ ನಿಗಮದ ಅಧಿಕಾರಿಗಳು ರೈತರ ಮತ್ತು ಜಿಲ್ಲಾಡಳಿತಕ್ಕೆ ತಪ್ಪುಮಾಹಿತಿ ನೀಡುವ ಮೂಲಕ ದಾರಿತಪ್ಪಿಸುತ್ತಿದ್ದಾರೆ. ಇನ್ನಾದರೂ ಮೂರು ಮತ್ತು ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸಬೇಕು. ತಪ್ಪಿದಲ್ಲಿ ದೊಡ್ಡ ಮಟ್ಟದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲವನ್ನೂ ಸಾವಧಾನವಾಗಿ ಆಲಿಸಿದ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಕಾವೇರಿ ನೀರಾವರಿ ನಿಗಮದ ಅಧಿಕಾರಿ ಕೆ.ಎಸ್.ಮಹೇಶ್ ಅವರಿಂದ ಮಾಹಿತಿ ಪಡೆದರು. ನಂತರ ಮಾತನಾಡಿ, ಸಮಸ್ಯೆ ಬಗೆಹರಿಸುವ ಸಲುವಾಗಿ ಖುದ್ದಾಗಿ ತಾವೇ ಕೆರೆಗಳ ವೀಕ್ಷಣೆಗೆ ಮುಂದಾಗಿದ್ದೇನೆ. ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ಈ ಮಾಸಾಂತ್ಯದ ವೇಳೆಗೆ ಮೂರು ಹಾಗೂ ನಾಲ್ಕನೇ ಹಂತದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿ ಕಿಲಗೆರೆ ಹಾಗೂ ಮೇಲೂರು ಕೆರೆಗಳ ವೀಕ್ಷಣೆಗೆ ತೆರಳಿದರು.
ಈ ಸಂದರ್ಭದಲ್ಲಿ ತೆರಕಣಾಂಬಿ ನಾಡಕಚೇರಿಯ ಕಂದಾಯಾಧಿಕಾರಿ ನಾಗೇಂದ್ರಪ್ಪ, ಮುಖಂಡರಾದ ಸಿದ್ದಮಲ್ಲಪ್ಪ, ಬೆಳ್ಳಪ್ಪ, ಗುರುಸಿದ್ದಪ್ಪ, ನಾಗಭೂಷಣ, ಮಹದೇವಸ್ವಾಮಿ, ಮಂಜುನಾಥ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net