ಹನೂರು: ಮಲೆಮಹದೇಶ್ವರ ಬೆಟ್ಟದ ಆನೆತಲೆದಿಂಬದ ಬಳಿ ಮಂಗಳವಾರ ಚಿರತೆ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕವನ್ನುಂಟು ಮಾಡಿದೆ. ತಿಂಗಳ ಹಿಂದೆ ಈ ಮಾರ್ಗದ ರಂಗಸ್ವಾಮಿ ಒಡ್ಡುವಿನ ಬಳಿ ಚಿರತೆ ದಾಳಿ ನಡೆಸಿ ಪಾದಯಾತ್ರಿಯೊಬ್ಬರನ್ನು ಬಲಿ ಪಡೆದಿತ್ತು. ಜತೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ಮಹಾ ಶಿವರಾತ್ರಿ ಜಾತ್ರಾ ವೇಳೆ ಈ ಮಾರ್ಗದಲ್ಲಿ ಸಿಬ್ಬಂದಿ ನಿಯೋಜಿಸಿತ್ತು. ಜತೆಗೆ ಅಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿಲ್ಲ. ಮಂಗಳವಾರ ಕಾರಿನಲ್ಲಿ ತೆರಳಿದ್ದ ಭಕ್ತರಿಗೆ ಆನೆತಲೆ ದಿಂಬದ ಬಳಿ ಚಿರತೆ ಕಾಣಿಸಿಕೊಂಡಿದೆ. ಇದರ ದೃಶ್ಯವನ್ನು ಭಕ್ತರೊಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜತೆಗೆ ಬೆಟ್ಟದ ಬೇಡಗಂಪಣರು ಫೇಸ್‌ಬುಕ್ ಖಾತೆಯಲ್ಲಿ ದೃಶ್ಯವನ್ನು ಹಂಚಿಕೆ ಮಾಡಲಾಗಿದೆ.