ತಾಳುಬೆಟ್ಟ ಮಾರ್ಗದಲ್ಲಿ ಚಿರತೆ

 ತಾಳುಬೆಟ್ಟ ಮಾರ್ಗದಲ್ಲಿ ಶುಕ್ರವಾರ ಕಾಣಿಸಿಕೊಂಡ ಚಿರತೆ.
ತಾಳುಬೆಟ್ಟ ಮಾರ್ಗದಲ್ಲಿ ಶುಕ್ರವಾರ ಕಾಣಿಸಿಕೊಂಡ ಚಿರತೆ.
Published on
ಹನೂರು : ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಾಳುಬೆಟ್ಟ ಮಾರ್ಗದಲ್ಲಿ ಶುಕ್ರವಾರ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.
ಈ ಮಾರ್ಗವು ಮಲೆಮಹದೇಶ್ವರ ವನ್ಯಜೀವಿ ಧಾಮದ ನಡುವೆ ಹಾದು ಹೋಗಿದ್ದು, ಹಿಂದೆ ಚಿರತೆ ಕಾಟ ಇರಲಿಲ್ಲ. ಆದರೆ ಕಳೆದ 2 ತಿಂಗಳ ಹಿಂದೆ ಈ ಮಾರ್ಗದ ರಂಗಸ್ವಾಮಿ ಒಡ್ಡುವಿನ ಬಳಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರೊಬ್ಬರೂ ಚಿರತೆ ದಾಳಿಗೆ ಬಲಿಯಾಗಿದ್ದರು. ಜತೆಗೆ ಮಹಾ ಶಿವರಾತ್ರಿ ಜಾತ್ರಾ ವೇಳೆ ಪಾಲಕರೊಂದಿಗೆ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇದರಿಂದ ಭಕ್ತರು ಆತಂಕಕ್ಕೆ ಒಳಗಾಗಿದ್ದರು.
ಹೀಗಿರುವಾಗ ಶುಕ್ರವಾರ ಬೆಳಗ್ಗೆ 8.30ರಲ್ಲಿ ಪಟ್ಟಣದ ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ಎಂಬುವರು ಕುಟುಂಬಸ್ಥರೊಂದಿಗೆ ಮ.ಬೆಟ್ಟಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ತಾಳುಬೆಟ್ಟದ ಮಾರ್ಗದಲ್ಲಿ ಚಿರತೆ ಕಾಣಿಸಿಕೊಂಡಿದೆ.
ರಸ್ತೆಯನ್ನು ದಾಟುತ್ತಿದ್ದ ಚಿರತೆ ವಾಹನ ಬರುತ್ತಿರುವುದನ್ನು ಗಮನಿಸಿ ರಸ್ತೆ ಬದಿಯ ಮರದ ಕೆಳಗೆ ತೆರಳಿ ವಿಶ್ರಮಿಸಿದೆ. ಭಕ್ತರೊಬ್ಬರು ಇದರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲೂ ಹರಿ ಬಿಟ್ಟಿದ್ದಾರೆ. ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಭಕ್ತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಚಿರತೆ ಸೆರೆಗೆ ಒತ್ತಾಯ: ತಾಳುಬೆಟ್ಟ ಮಾರ್ಗದ ರಂಗಸ್ವಾಮಿ ಒಡ್ಡುವಿನ ಬಳಿ ಭಕ್ತರೊಬ್ಬರೂ ಬಲಿಯಾಗಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇರಿಸಿ ಚಿರತೆ ಸೆರೆಗೆ ಮುಂದಾಗಿದ್ದರು. ಆದರೆ ಬೋನಿಗೆ ಬೀಳದ ಚಿರತೆಯನ್ನು ಇನ್ನು ಸಹ ಸೆರೆ ಹಿಡಿಯಲು ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಪರಿಣಾಮ ರಂಗಸ್ವಾಮಿ ಒಡ್ಡು ಹಾಗೂ ಶನೈಚ್ಛರ ಸ್ವಾಮಿ ದೇಗುಲದ ಆಸುಪಾಸು ರಾತ್ರಿ ವೇಳೆ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇದ್ದು, ಭಕ್ತರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಪ್ರಾಣಾಪಾಯ ಸಂಭವಿಸುವ ಮುನ್ನಾ ಎಚ್ಚೆತ್ತು ಚಿರತೆಯನ್ನು ಸೆರೆ ಹಿಡಿಯುವಂತೆ ಭಕ್ತರು ಹಾಗೂ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net