ಹೊರಗಿನವರನ್ನು ಕರೆತಂದು ಪ್ರತಿಭಟನೆ

ಗುಂಡ್ಲುಪೇಟೆ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಗಣೇಶ್ ಪ್ರಸಾದ್ ವೀಕ್ಷಿಸಿದರು. ಶರವಣ, ಮಂಜುನಾಥ್, ಮಧು, ಕಿರಣ್, ಸುರೇಶ್, ಕುಮಾರ್, ಎಚ್.ಎನ್.ಬಸವರಾಜು, ರಾಜು, ಲಿಂಗರಾಜು ಇದ್ದರು.
ಗುಂಡ್ಲುಪೇಟೆ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯನ್ನು ಗಣೇಶ್ ಪ್ರಸಾದ್ ವೀಕ್ಷಿಸಿದರು. ಶರವಣ, ಮಂಜುನಾಥ್, ಮಧು, ಕಿರಣ್, ಸುರೇಶ್, ಕುಮಾರ್, ಎಚ್.ಎನ್.ಬಸವರಾಜು, ರಾಜು, ಲಿಂಗರಾಜು ಇದ್ದರು.
Published on
ಗುಂಡ್ಲುಪೇಟೆ: ತಾಲೂಕಿನ ಎಲ್ಲ ಕೆರೆಗಳಿಗೂ ನದಿಮೂಲದಿಂದ ನೀರು ತುಂಬಿಸುವ ಕೆಲಸ ಪ್ರಗತಿಯಲ್ಲಿದ್ದು, ತಾಂತ್ರಿಕ ಕಾರಣದಿಂದ ಸ್ವಲ್ಪ ಸಮಸ್ಯೆಯಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಸ್ವಂತ ಶಕ್ತಿಯಿಲ್ಲದೆ ಹೊರಗಿನವರನ್ನು ಕರೆತಂದು ಪ್ರತಿಭಟನೆ ಮಾಡುತ್ತಿದ್ದಾರೆ. ಹಿಂದೆ ರೈತರಿಗೆ ಭರವಸೆ ನೀಡಿದ್ದಂತೆ 6ನೇ ತಾರೀಖಿನೊಳಗೆ ನಾಲ್ಕನೇ ಹಂತದ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ. ಮಧ್ಯೆ ಕೆಲವು ದಿನ ಮೋಟಾರು ನಿಲ್ಲಿಸಿದ್ದರಿಂದ ಕೆರೆಗಳು ಮತ್ತೆ ಒಣಗಿಹೋಗಿವೆ. ಪ್ರತಿ ಬಾರಿಯೂ ತಾಂತ್ರಿಕ ಕಾರಣಗಳಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು ಸಮಸ್ಯೆಯಾಗುತ್ತಿರುವ ಕಾರಣದಿಂದ 475 ಕೋಟಿ ರೂ. ವೆಚ್ಚದ 110 ಕೆರೆಗಳ ಯೋಜನೆಯಲ್ಲಿ ಮೊದಲಿಗೆ ಹುತ್ತೂರು ಕೆರೆಯಿಂದ ಕಲ್ಲುಕಟ್ಟೆ ಹಳ್ಳ ಜಲಾಶಯದವರೆಗೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿರಂಜನಕುಮಾರ್ ಶಾಸಕರಾಗಿದ್ದಾಗ ಕಾಂಗ್ರೆಸ್ ಕಾರ್ಯಕರ್ತನೊಬ್ಬನ ವಿರುದ್ಧ ಬೇಗೂರು ಠಾಣೆಯಲ್ಲಿ ಸುಳ್ಳು ಕೇಸ್ ಹಾಕಿಸಿದ್ದರು. ಈ ಬಗ್ಗೆ ನಾನು ಡಿವೈಎಸ್‌ಪಿಗೆ ಕರೆ ಮಾಡಿ ಕೇಸ್ ವಾಪಸ್ ಪಡೆಯದಿದ್ದರೆ ಅನ್ಯಾಯದ ವಿರುದ್ಧ ಠಾಣೆ ಎದುರು ನಾನೊಬ್ಬನೇ ಪ್ರತಿಭಟಿಸುವುದಾಗಿ ಹೇಳಿದ್ದೆ. ಹಾಗೆ ಹೇಳಿದ ಕೂಡಲೇ ಪೊಲೀಸರು ಕೇಸ್ ವಾಪಸ್ ಪಡೆದರು. ಆದರೆ ನಿರಂಜನಕುಮಾರ್ ಪ್ರತಿಬಾರಿಯೂ ಕ್ಷೇತ್ರದ ಹೊರಗಿನ ಮುಖಂಡರನ್ನು ಕರೆತಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ನೀರು ಬಿಡಿಸುವ ಬಗ್ಗೆ ಇಲ್ಲವೇ ಬೇರಾವುದೇ ವಿಚಾರಕ್ಕೂ ಅವರಿಗೆ ನನ್ನ ವಿರುದ್ಧ್ದ ಪ್ರತಿಭಟನೆ ಮಾಡಲು ಸ್ವಂತ ಶಕ್ತಿ ಇಲ್ಲ ಎಂದು ಹರಿಹಾಯ್ದರು.
ಶ್ರೀರಾಮದೇವರಗುಡ್ಡದ ಸಮೀಪ ವಸತಿ ರಹಿತರಿಗೆ ನೀಡಲು ಗುರುತಿಸಿದ್ದ ನಿವೇಶನಗಳನ್ನು ಬಿಜೆಪಿ ಅವಧಿಯಲ್ಲಿ ಅನರ್ಹರಿಗೆ ಮಂಜೂರು ಮಾಡಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಸದಸ್ಯರು ಲೋಕಾಯುಕ್ತರಿಗೆ ದೂರು ನೀಡಿದ್ದು ಪ್ರಕರಣ ನಮ್ಮಂತೆ ಆಗಿದೆ. ಸದ್ಯದಲ್ಲಿಯೇ ಸ್ಥಳೀಯ ಹಾಗೂ ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಣೆ ಮಾಡಲಾಗುವುದು. ಪಟ್ಟಣದ ಫುಟ್‌ಪಾತ್ ಅತಿಕ್ರಮಿಸಿರುವವರಿಗೆ ನೊಟೀಸ್ ನೀಡಲಾಗಿದ್ದು, ಸದ್ಯದಲ್ಲಿಯೇ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶರವಣ, ಇಂಜಿನಿಯರ್ ಮಂಜುನಾಥ್, ಮಾಜಿ ಅಧ್ಯಕ್ಷರಾದ ಮಧು, ಕಿರಣ್, ಮಾಜಿ ಸದಸ್ಯರಾದ ಸುರೇಶ್, ಕುಮಾರ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮುಖಂಡರಾದ ರಾಜು, ಲಿಂಗರಾಜು ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net