ಕೊಳ್ಳೇಗಾಲದಲ್ಲಿ ಪಂಜಿನ ಮೆರವಣಿಗೆ

ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ 208ನೇ ವರ್ಷದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಎನ್.ಮಹೇಶ್ ಸೇರಿದಂತೆ ಇತರ ಗಣ್ಯರು ಚಾಲನೆ ನೀಡಿದರು.
ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ 208ನೇ ವರ್ಷದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಎನ್.ಮಹೇಶ್ ಸೇರಿದಂತೆ ಇತರ ಗಣ್ಯರು ಚಾಲನೆ ನೀಡಿದರು.
Published on
ಕೊಳ್ಳೇಗಾಲ: ಪಟ್ಟಣದಲ್ಲಿ ಗುರುವಾರ ಸಂಜೆ ಕೊಳ್ಳೇಗಾಲ ತಾಲೂಕು ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣ ಸಮಿತಿಯಿಂದ 208ನೇ ವರ್ಷದ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ದಲಿತ ಮುಖಂಡರು, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆ ಮತ್ತು ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪಂಜನ್ನು ಹಿಡಿದು ಪಟ್ಟಣ ಪ್ರಮುಖ ರಸ್ತೆಗಳಲ್ಲಿ ಸಾಗಿದರು.
ಎತ್ತಿನಗಾಡಿ, ತೆರೆದ ವಾಹನದಲ್ಲಿ ಬುದ್ಧ ಪ್ರತಿಮೆ, ಕೋರೆಗಾಂವ್ ವಿಜಯಸ್ಥಂಭ ಹಾಗೂ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕೊನೆಗೆ ಪಂಜಿನ ಮೆರವಣಿಗೆ ಎಂಜಿಎಸ್‌ವಿ ಮೈದಾನ ಆವರಣ ತಲುಪಿತು.
ಬಳಿಕ ಕೋರೆಗಾಂವ್ ವಿಜಯ ಸ್ಥಂಭಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಎನ್.ಮಹೇಶ್ ಸೇರಿದಂತೆ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಇದೇ ವೇಳೆ ಮುಖ್ಯ ಭಾಷಣಕಾರ ಪ್ರೊ. ದೇವರಾಜು ಮಾತನಾಡಿ, ಕೊಳ್ಳೇಗಾಲದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪಶ್ಯತೆ, ಮೇಲು-ಕೀಳು, ಅಸಮಾನತೆ ವಿರುದ್ಧ ಸೆಟೆದು ನಿಂತ ಮಹಾರ್ ಸೈನಿಕರ ಶೌರ್ಯದ ದಿನವೇ ಭೀಮ ಕೋರೆಗಾಂವ್ ವಿಜಯೋತ್ಸವಾಗಿದೆ. 500 ಮಹಾರ್ ಸೈನಿಕರು 30 ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿ ಗೆಲವು ಸಾಧಿಸಿದ ದಿನವಾಗಿದೆ. ಮುಚ್ಚಿ ಹೋಗಿದ್ದ ಇತಿಹಾಸವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬೆಳಕಿಗೆ ತಂದು ದಲಿತರ ಇತಿಹಾಸ ಎಂದು ತೋರಿಸಿದ್ದಾರೆ ಎಂದರು.
ಈ ವೇಳೆ ಮುಖ್ಯ ಮಂತ್ರಿಗಳಿಗೆ ಶಾಸಕ ಎ.ಆರ್.ಕೃಷ್ಣ ಮೂರ್ತಿ ಅವರ ಮೂಲಕ ಭೀಮ ಕೋರೆಗಾಂವ್ ವಿಜಯೋತ್ಸವನ್ನು ರಾಜ್ಯ ಪಠ್ಯದಲ್ಲಿ ಸೇರಿಸುವಂತೆ ಆಚರಣಾ ಸಮಿತಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಭೀಮ ಕೋರೆಗಂವ್ ಆಚರಣಾ ಸಮಿತಿ ಸದಸ್ಯರು, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು, ನಗರಸಭೆ ಮಾಜಿ ಸದಸ್ಯರು, ಭೀಮನಗರದ ಯಜಮಾನರು, ಮುಖಂಡರು, ಜೈ ಭೀಮ್ ರೈತ ಸಂಘದ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಯಜಮಾನರು, ಅಂಬೇಡ್ಕರ್ ಸಂಘಟನೆ ಪದಾಧಿಕಾರಿಗಳು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net