ಹನೂರು:ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಬುಧವಾರ ಸಂಜೆ ಕಾರ್ತಿಕ ಮಾಸದ ಅಂಗವಾಗಿ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನ್ನಿಧ್ಯ ಹಾಗೂ ಭಕ್ತರ ಸಮ್ಮುಖದಲ್ಲಿ ದೀಪೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೀಪೋತ್ಸವದ ಅಂಗವಾಗಿ ಮಠವನ್ನು ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಜತೆಗೆ ಶ್ರೀಗಳ ಗದ್ದುಗೆಯನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಸಂಜೆ 7ರ ವೇಳೆಯಲ್ಲಿ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಭಕ್ತರ ಸಮ್ಮುಖದಲ್ಲಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಂತ್ರಗಳನ್ನು ಪಠಿಸಲಾಯಿತು. ಬಳಿಕ ಶ್ರೀಗಳು ದೀಪ ಹಚ್ಚುವುದರ ಮೂಲಕ ದೀಪೋತ್ಸವವನ್ನು ನೆರವೇರಿಸಿದರು.
ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಕಣ್ತುಂಬಿಕೊಂಡು ಭಕ್ತಿ ಭಾವ ಮೆರೆದರು. ದೀಪ ಹಚ್ಚುವಿಕೆಯ ಕಾರ್ಯದಲ್ಲಿ ಮಗ್ನರಾದರು. ಗದ್ದುಗೆಯ ದರ್ಶನ ಪಡೆದ ಭಕ್ತರು ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದರು.
ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಕೆಲ ಭಕ್ತರು ಮಠದಲ್ಲೇ ವಾಸ್ತವ್ಯ ಹೂಡಿ ದೀಪೋತ್ಸವದ ಕಾರ್ಯದಲ್ಲಿ ಭಾಗಿಯಾಗಿದ್ದರು. ಹಾಗಾಗಿ ಶ್ರೀ ಮಠದಲ್ಲಿ ದೀಪೋತ್ಸವವು ಶ್ರದ್ಧಾ-ಭಕ್ತಿಯಿಂದ ಜರುಗಿತು.
ಬೇಡಗಂಪಣರು, ಶ್ರೀ ಮಠದ ಭಕ್ತರು, ಸಾಲೂರು ಮಠದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನೌಕರರು ಇದ್ದರು.