ಹನೂರು ಭಾಗದ ಗ್ರಾಮಗಳಿಗೆ ಸಿಇಓ ದಿಢೀರ್ ಭೇಟಿ

ಹನೂರು ತಾಲೂಕಿನ ಕುರಹಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗೆ ಜಿಲ್ಲಾ ಪಂಚಾಯಿತಿ ಸಿಇಓ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಮೇಶ್ ಹಾಗೂ ಇನ್ನಿತರರು ಹಾಜರಿದ್ದರು.
ಹನೂರು ತಾಲೂಕಿನ ಕುರಹಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗೆ ಜಿಲ್ಲಾ ಪಂಚಾಯಿತಿ ಸಿಇಓ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಮೇಶ್ ಹಾಗೂ ಇನ್ನಿತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕಾಮಗಾರಿಗಳ ಪರಿಶೀಲನೆ
  • ಶೆಟ್ಟಳ್ಳಿ ಹಾಗೂ ಕುರಹಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ
  • ವಿವಿಧ ವಸತಿ ಯೋಜನೆ ಪ್ರಗತಿ ಪರಾಮರ್ಶಿಸಿದರು
ಚಾಮರಾಜನಗರ: ಹನೂರು ತಾಲೂಕಿನ ಶೆಟ್ಟಳ್ಳಿ ಹಾಗೂ ಕುರಹಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಸೋಮವಾರ ಭೇಟಿ ನೀಡಿ ಕುಡಿಯುವ ನೀರು ಯೋಜನೆ, ಉದ್ಯೋಗ ಖಾತರಿ ಯೋಜನೆ ಹಾಗೂ ಇನ್ನಿತರ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಗ್ರಾಮ ಪಂಚಾಯಿತಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಕುಡಿಯುವ ನೀರು, ತೆರಿಗೆ ವಸೂಲಾತಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಎನ್.ಆರ್.ಎಲ್.ಎಂ, ಸ್ವಚ್ಛ ಭಾರತ್ ಮಿಷನ್, ಜಲಜೀವನ್ ಮಿಷನ್, ವಿವಿಧ ವಸತಿ ಯೋಜನೆ ಪ್ರಗತಿ ಪರಾಮರ್ಶಿಸಿದರು. 14 ಮತ್ತು 15ನೇ ಹಣಕಾಸು ಯೋಜನೆ ಹಾಗೂ ಇತರೆ ಗ್ರಾಮೀಣಾಭಿವೃದ್ದಿ ಯೋಜನೆಗಳಡಿ ಅನುಷ್ಟಾನಗೊಳಿಸಲಾಗಿರುವ ಕಾಮಗಾರಿ ವೀಕ್ಷಿಸಿದರು. ಗ್ರಂಥಾಲಯ, ಘನ ಮತ್ತು ದ್ರವತ್ಯಾಜ್ಯ ವಿಲೇವಾರಿ ಘಟಕಗಳ ಅನುಷ್ಟಾನ, ತೆರಿಗೆ ವಸೂಲಾತಿ ಕುರಿತ ಕಡತಗಳು ಮತ್ತು ದಾಖಲಾತಿಗಳ ನಿರ್ವಹಣೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿದರು.
ಬೇಸಿಗೆ ಕಾಲ ಪ್ರಾಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಟಳ್ಳಿ ಗ್ರಾಮದಲ್ಲಿ ಸ್ಥಗಿತಗೊಂಡಿರುವ ಹ್ಯಾಂಡ್ ಪಂಪ್‌ಗಳು, ತೆರೆದ ಬಾವಿಗಳು ಹಾಗೂ ಬೋರ್‌ವೆಲ್ಗಳನ್ನು ಪರಿಶೀಲಿಸಿ, ಸ್ಥಗಿತಗೊಂಡಿರುವ ನೀರಿನ ಮೂಲಗಳನ್ನು ತುರ್ತಾಗಿ ಸರಿಪಡಿಸುವಂತೆ ಸಂಬಂಧಪಟ್ಟ ಸಹಾಯಕ ಇಂಜಿನಿಯರ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮದ ವಿವಿಧ ಬೀದಿ, ಬಡಾವಣೆಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ವತಿಯಿಂದ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಟಾನಗೊಳಿಸಲಾಗಿರುವ ನಳ ಸಂಪರ್ಕ ಕಾಮಗಾರಿ, ಕಿರು ನೀರು ಸರಬರಾಜು ಪೂರೈಕೆ ಕೇಂದ್ರಗಳನ್ನು ಪರಿಶೀಲಿಸಿದರು. ಗ್ರಾಮದ ಎಲ್ಲಾ ಬೀದಿಗಳಿಗೂ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಬೇಕು. ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾದಲ್ಲಿ ತುರ್ತಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು. ಪರ್ಯಾಯ ವ್ಯವಸ್ಥೆಗಳನ್ನು ಕೈಗೊಂಡು ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ಹಾಗೂ ಇನ್ನಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net