ರಾಮನಗುಡ್ಡೆ ಡ್ಯಾಂಗೆ ಹರಿಯಲಿದೆ ಕಾವೇರಿ

ಕಾವೇರಿ ನದಿ ಮೂಲದಿಂದ ಹಳ್ಳದ ಮೂಲಕ ನೀರು ತುಂಬಿಸುವ ಯೋಜನೆಗೆ ಒಳಪಟ್ಟಿರುವ ರಾಮನಗುಡ್ಡೆ ಡ್ಯಾಂ.
ಕಾವೇರಿ ನದಿ ಮೂಲದಿಂದ ಹಳ್ಳದ ಮೂಲಕ ನೀರು ತುಂಬಿಸುವ ಯೋಜನೆಗೆ ಒಳಪಟ್ಟಿರುವ ರಾಮನಗುಡ್ಡೆ ಡ್ಯಾಂ.
Published on

ಪ್ರಮುಖ ಮುಖ್ಯಾಂಶಗಳು

  • ನನಸಾದ ರೈತರ ಬಹುದಿನಗಳ ಕನಸು
ಹನೂರು: ತಾಲೂಕಿನ ಹುಲುಸುಗುಡ್ಡೆ ಸಮೀಪದ ರಾಮನಗುಡ್ಡೆ ಡ್ಯಾಂಗೆ ಕಾವೇರಿ ನದಿ ಮೂಲದಿಂದ ಹಳ್ಳದ ಮೂಲಕ ನೀರು ತುಂಬಿಸುವ ಕಾರ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಇದರಿಂದ ರೈತರ ಬಹು ವರ್ಷಗಳಕನಸು ನನಸಾಗುವ ಕಾಲ ಕೂಡಿ ಬಂದಂತಾಗಿದೆ.
ಕ್ಷೇತ್ರ ವ್ಯಾಪ್ತಿಯ ಹುಬ್ಬೆಹುಣಸೆ, ರಾಮನಗುಡ್ಡೆ ಹಾಗೂ ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಬೇಸಿಗೆ ವೇಳೆ ಈ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಇದರಿಂದ ಕೃಷಿಗೆ ತೊಡಕಾಗಿ ಪರಿಣಮಿಸಿತ್ತು. ಜತೆಗೆ ಅಂತರ್ಜಲ ಮಟ್ಟದಿಂದ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿತ್ತು. ಡ್ಯಾಂಗಳಿಗೆ ನದಿ ಮೂಲದಿಂದ ನೀರು ತುಂಬಿಸುವಂತೆ ರೈತರು ಒತ್ತಾಯಿಸಿದ್ದರು. ಈ ಹಿನ್ನೆಲೆ ಕಳೆದ 5 ವರ್ಷದ ಹಿಂದೆ ಕ್ಷೇತ್ರ ವ್ಯಾಪ್ತಿಯ ಈ 3 ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಡಿ 132 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ ಕಾಮಗಾರಿ ಕೆಲ ಕಾರಣಾಂತರದಿಂದ ಬೂದುಬಾಳು ಗ್ರಾಮದವರೆಗಷ್ಟೇ ಸೀಮಿತವಾಗಿತ್ತು. ಇದರಿಂದ ಈ 3 ಡ್ಯಾಂಗಳಿಗೆ ನೀರು ಪೂರೈಕೆ ಸಾಧ್ಯವಾಗಲಿಲ್ಲ. ಬಳಿಕ ಕಾಮಗಾರಿ ಕೈಗೊಂಡು ಗುಂಡಾಲ್ ಜಲಾಶಯಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು, ಈ ಭಾಗದ ರೈತರಿಗೆ ಅನುಕೂಲವಾಗುತ್ತಿದೆ. ಆದರೆ ಇನ್ನುಳಿದ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಡ್ಯಾಂಗೆ ಕೈಗೊಳ್ಳಬೇಕಿದ್ದ ಪೈಪ್‌ಲೈನ್ ಕಾಮಗಾರಿ ಕೆಲ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಇದರಿಂದ ನದಿ ಮೂಲದಿಂದ ನೀರೊದಗಿಸುವ ಕಾರ್ಯ ನನೆಗುದಿಗೆ ಬಿದ್ದಿತ್ತು. ಈ 2 ಡ್ಯಾಂಗಳಿಗೂ ಸಹ ನೀರು ತುಂಬಿಸುವಂತೆ ರೈತರು ಹಾಗೂ ರೈತಪರ ಸಂಘಟನೆಗಳು ಒತ್ತಾಯಿಸುತ್ತಲೇ ಇದ್ದರು. ಆದರೆ ಸರ್ಕಾರದಿಂದ ಅನುದಾನ ಸಿಗದ ಪರಿಣಾಮ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
ರೈತರ ಬೇಡಿಕೆಯ ಕನಸು
ನದಿ ಮೂಲದಿಂದ ಕೈಗೊಂಡಿದ್ದ ಪೈಪ್‌ಲೈನ್ ಕಾಮಗಾರಿ ಬೂದುಬಾಳು ಗ್ರಾಮದ ನೀರು ಸರಬರಾಜು ಘಟಕದವರೆಗೆ ಮಾತ್ರ ಆಗಿತ್ತು. ಇಲ್ಲಿಂದ ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಜಲಾಶಯಕ್ಕೆ ನೀರು ಪೂರೈಸಬೇಕಾದರೆ ಪೈಪ್‌ಲೈನ್ ಆಗಬೇಕಿತ್ತು. ಆದರೆ ಸರ್ಕಾರದಿಂದ ಅನುದಾನ ದೊರೆಕಲಿಲ್ಲ. ಇದು ರೈತರಲ್ಲಿ ಬೇಸರ ಉಂಟು ಮಾಡಿತ್ತು. ಈ ಬಗ್ಗೆ ಅಗತ್ಯ ಕ್ರಮವಹಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರು ರೈತರ ಸಲಹೆ ಪಡೆದು ಗುಂಡಾಲ್ ಜಲಾಶಯಕ್ಕೆ ನೀರು ಪೂರೈಕೆಯಾಗುತ್ತಿರುವ ಬೂದುಬಾಳು ಗ್ರಾಮದ ನೀರಿನ ಘಕಟದಿಂದ ಹಳ್ಳದ ಮೂಲಕ ರಾಮನಗುಡ್ಡೆ ಡ್ಯಾಂಗೆ ನೀರು ಹರಿಸಬಹುದು ಎಂಬುದನ್ನು ಮನಗಂಡರು. ಸಂಬಂಧಪಟ್ಟ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕೂಲಂಕುಷವಾಗಿ ಪರಿಶೀಲಿಸಿದ್ದರು. ಈ ವೇಳೆ ಹಳ್ಳದ ಮೂಲಕ ರಾಮನಗುಡ್ಡೆ ಡ್ಯಾಂಗೆ ನೀರು ಹರಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದರು. ಕಳೆದ ಆಗಸ್ಟ್‌ನಲ್ಲಿ ಬೂದುಬಾಳುವಿನಿಂದ ರಾಮನಗುಡ್ಡೆ ಡ್ಯಾಂಗೆ ಸಂಪರ್ಕ ಕಲ್ಪಿಸುವ ಹಳ್ಳದ ಹೂಳೆತ್ತುವ ಕಾಮಗಾರಿಗೆ ಶಾಸಕರು ಭೂಮಿಪೂಜೆಯನ್ನು ನೆರವೇರಿಸಿದ್ದು, ಕಾರ್ಯವು ಆಗಿದೆ. ಆದರೆ ಕೆಲ ಕಾರಣಾಂತರದಿಂದ ನೀರು ಹರಿಸಲು ತೊಡಕಾಗಿ ಪರಿಣಮಿಸಿತ್ತು. ರಾಮನಗುಡ್ಡೆ ಡ್ಯಾಂಗೆ ನೀರು ಹರಿಸಲೇಬೇಕು ಎಂದು ದೃಢ ನಿರ್ಧಾರ ಹೊಂದಿದ ಶಾಸಕರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಅಗತ್ಯ ಸಲಹೆ, ಸೂಚನೆಯನ್ನು ನೀಡಿದ್ದರು. ಪರಿಣಾಮ ಬೂದುಬಾಳು ನೀರು ಘಟಕದಿಂದ 1.5 ಕಿ.ಮೀ ದೂರದವರೆಗೆ ಪೈಪ್‌ಲೈನ್ ಕಾಮಗಾರಿ ಕೈಗೊಂಡು ರಸ್ತೆ ಸಮೀಪದ ಹಳ್ಳಕ್ಕೆ ನೀರು ಹರಿಸಲು 2.50 ಕೋಟಿ ರೂ ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಿದ್ದರು. ಬಳಿಕ ಕಾಮಗಾರಿ ಆರಂಭಗೊಂಡ ಸ್ಥಳಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಹತ್ತಾರು ಸಲ ಭೇಟಿ ನೀಡಿ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ಇದೀಗ ರಾಮನಗುಡ್ಡೆ ಡ್ಯಾಂಗೆ ಹಳ್ಳದ ಮೂಲಕ ನೀರು ತುಂಬಿಸುವ ಕಾಲ ಕೂಡಿ ಬಂದಿದೆ.
16 ರಂದು ಶಾಸಕರಿಂದ ಚಾಲನೆ
ಜ.16 ರಂದು ಶಾಸಕರು ಬೂದುಬಾಳು ಗ್ರಾಮದ ನೀರು ಸರಬರಾಜು ಘಟಕದಲ್ಲಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಭರದಿಂದ ಸಾಗಿದೆ. ನೀರು ತುಂಬಿಸುವ ಕಾರ್ಯಕ್ಕೆ ರೈತರು ಉತ್ಸುಕತೆಯೊಂದಿಗೆ ಕಾತುರದಿಂದ ಕಾಯುತ್ತಿದ್ದಾರೆ. ಬೇಡಿಕೆಯ ಕನಸು ಈಡೇರಿದಂತಾಗಿದೆ. ಬೇಸಿಗೆ ವೇಳೆ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ ರೈತರು ನಿಟ್ಟುಸಿರು ಬಿಟ್ಟಂತಾಗಿದೆ.
ಕೃಷಿ, ಅಂತರ್ಜಲ ವೃದ್ಧಿಗೆ ಸಹಕಾರಿ
ರಾಮನಗುಡ್ಡೆ ಡ್ಯಾಂ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ಡ್ಯಾಂ ಬತ್ತಿ ಹೋಗಿತ್ತು. ಅಂತರ್ಜಲ ಮಟ್ಟ ಕುಸಿತದಿಂದ ರೈತರು ಕೃಷಿ ಮಾಡಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಆದರೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿತ್ತು. ಇದೀಗ ಶಾಸಕರು ಕಾವೇರಿ ನದಿಯ ನೀರು ಹಳ್ಳದ ಮೂಲಕ ರಾಮನಗುಡ್ಡೆ ಡ್ಯಾಂಗೆ ಹರಿಸಲು ಕೈಗೊಂಡಿರುವ ಕಾರ್ಯಕ್ಕೆ ರೈತಾಪಿ ವರ್ಗದಿಂದ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗುವುದರ ಮೂಲಕ ರೈತರ ಕೃಷಿಗೆ ಅನುಕೂಲವಾಗಲಿದೆ. ಜನ, ಜಾನುವಾರುಗಳು ಕುಡಿಯುವ ನೀರಿಗೆ ಸಹಕಾರಿಯಾಗಲಿದೆ.
ಹುಬ್ಬೆಹುಣಸೇ ಡ್ಯಾಂಗೂ ಅಗತ್ಯ ಕ್ರಮ
ರಾಮನಗುಡ್ಡ್ಡೆ ಡ್ಯಾಂಗೆ ನದಿ ಮೂಲದ ನೀರನ್ನು ತುಂಬಿಸಲು ಕ್ರಮವಹಿಸಿದಂತೆ ಉದ್ದನೂರು ಸಮೀಪದ ಹುಬ್ಬೆಹುಣಸೆ ಡ್ಯಾಂಗೂ ಸಹ ನೀರು ತುಂಬಿಸಲು ಶಾಸಕರು ಅಗತ್ಯ ಕ್ರಮವಹಿಸಿದ್ದು, ಈಗಾಗಲೇ ರೈತರ ಸಭೆ ನಡೆಸಿ ಅಗತ್ಯ ಸಲಹೆಯನ್ನು ಪಡೆದಿದ್ದಾರೆ. ಈ ಡ್ಯಾಂನಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಲಾಗಿದೆ. ಹೂಳೆತ್ತುವ ಕಾಮಗಾರಿಯೂ ನಡೆದಿದೆ. ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಳ್ಳುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ಬಳಿಕ ಹುಬ್ಬೆಹುಣಸೆ ಡ್ಯಾಂಗೆ ನೀರು ತುಂಬಿಸಲು ಶಾಸಕರು ಅಗತ್ಯ ಕ್ರಮವಹಿಸಿದ್ದಾರೆ.

ರಾಮನಗುಡ್ಡೆ ಡ್ಯಾಂ 3-4 ವರ್ಷಗಳಿಂದ ಸಮರ್ಪಕ ಮಳೆಯಿಲ್ಲದ ಪರಿಣಾಮ ಬತ್ತಿ ಹೋಗಿತ್ತು. ಅಂತರ್ಜಲ ಮಟ್ಟ ಕುಸಿತದಿಂದ ಕೃಷಿಗೆ ತೊಡುಕಾಗಿತ್ತು. ಇದರಿಂದ ತುಂಬಾ ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಹಳ್ಳದ ಮೂಲಕ ಡ್ಯಾಂಗೆ ಕಾವೇರಿ ನದಿ ನೀರು ತುಂಬಿಸುತ್ತಿರುವುದು ರೈತರಿಗೆ ಅನುಕೂಲವಾಗಲಿದೆ. ನಮಗೆ ಖುಷಿ ತಂದಿದೆ.

ರಾಮನಗುಡ್ಡೆ ಡ್ಯಾಂಗೆ ನೀರು ತುಂಬಿಸುವುದು ಈ ಭಾಗದ ರೈತರ ಹಲವು ದಿನಗಳ ಬೇಡಿಕೆ. ಇದನ್ನು ಮನಗಂಡು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಖುದ್ಧಾಗಿ ಹಲವು ಬಾರಿ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಸತತ ಪ್ರಯತ್ನದ ಫಲ ಕಡಿಮೆ ವೆಚ್ಚದಲ್ಲಿ ಬೂದುಬಾಳು ನೀರು ಘಟಕದಿಂದ ಕಾವೇರಿ ನದಿ ನೀರನ್ನು 4.5 ಕಿ.ಮೀ ಹಳ್ಳದ ಮೂಲಕ ನೀರು ತುಂಬಿಸಲಾಗುತ್ತಿದ್ದು, ಇದಕ್ಕೆ ಜ.16 ರಂದು ಚಾಲನೆ ಸಿಗಲಿದೆ. ಇದರಿಂದ ಅಂತರ್ಜಲ ವೃದ್ಧಿಯಿಂದ ಈ ಭಾಗದ ರೈತರ ಕೃಷಿಗೆ ಹಾಗೂ ಜನ, ಜಾನುವಾರುಗಳ ಕುಡಿಯುವ ನೀರಿಗೂ ಅನುಕೂಲವಾಗಲಿದೆ.

--------------
ಕೋಟ್..
-----------------------
ಫೋಟೋ
09 ಹನೂರು 1
09 ಹನೂರು 1 ಎ ಡ್ಯಾಂಗೆ ನೀರು ಹರಿದು ಬರಲಿರುವ ಹಳ್ಳ.
09 ಹನೂರು 1 ಬಿ ರಾಮನಗುಡ್ಡೆ ಡ್ಯಾಂಗೆ ನೀರು ಹರಿದು ಬರಲಿರುವ ಬೂದುಬಾಳು ಗ್ರಾಮ ಸಮೀಪದ ನೀರು ಸರಬರಾಜು ಘಟಕ.
09 ಹನೂರು 1 ಸಿ ಹಳಕ್ಕೆ ನೀರು ಹರಿಸಲು ಅಳವಡಿಸಿರುವ ಪೈಪ್‌ಲೈನ್.
09 ಹನೂರು 1 ಡಿ ಬೂದುಬಾಳು ನೀರು ಸರಬರಾಜು ಘಟಕದಲ್ಲಿ ಅಳವಡಿಸಿರುವ ಕಂಟ್ರೋಲ್ವರ್ ಅನ್ನು ಶುಕ್ರವಾರ ಅಧಿಕಾರಿಗಳು ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net