ಜಾನುವಾರುಗಳ ಮೇವಿಗೆ ತತ್ವಾರ

ಗುಂಡ್ಲುಪೇಟೆ ತಾಲೂಕಿಗೆ ನೆರೆರಾಜ್ಯಗಳಿಂದ ಹಸಿ ಮೇವುವನ್ನು ರೈತರು ಟ್ರ್ಯಾಕ್ಟರ್ ಮೂಲಕ ಸಾಗಾಣೆ ಮಾಡುತ್ತಿರುವುದು.
ಗುಂಡ್ಲುಪೇಟೆ ತಾಲೂಕಿಗೆ ನೆರೆರಾಜ್ಯಗಳಿಂದ ಹಸಿ ಮೇವುವನ್ನು ರೈತರು ಟ್ರ್ಯಾಕ್ಟರ್ ಮೂಲಕ ಸಾಗಾಣೆ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೈಕೊಟ್ಟ ಮುಂಗಾರು ತಾಲೂಕಿನಾದ್ಯಂತ ಬಿತ್ತನೆ ಕಾರ್ಯಕ್ಕೆ ಹಿನ್ನಡೆ
  • ಕೈಕೊಟ್ಟ ಮುಂಗಾರು
ಗುಂಡ್ಲುಪೇಟೆ: ಈ ಬಾರಿ ಏಪ್ರಿಲ್ ಮುಗಿಯುತ್ತಾ ಬಂದರೂ ಮಳೆ ಬೀಳದಿರುವುದು ತಾಲೂಕಿನ ಜಾನುವಾರುಗಳ ಮೇವಿಗೆ ತತ್ವಾರವುಂಟು ಮಾಡಿದ್ದು, ರೈತರು ತಮ್ಮ ರಾಸುಗಳಿಗೆ ದುಬಾರಿ ಹಣ ಕೊಟ್ಟು ಮೇವು ಖರೀದಿಸುವಂತಾಗಿದೆ.
ಕಳೆದ ವರ್ಷ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಜಾನುವಾರುಗಳ ಮೇವಿನ ಮೂಲಗಳಾದ ಹುರುಳಿ, ನೆಲಗಡಲೆ, ಮುಸುಕಿನ ಜೋಳ ರಾಗಿಯನ್ನು ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಇದಕ್ಕೂ ಮುನ್ನ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಜೋಳ ಮುಂತಾದ ಬೆಳೆಗಳು ತೇವಾಂಶದ ಕೊರತೆ ಹಾಗೂ ಬಿಸಿಲಿನ ತಾಪಕ್ಕೆ ಬಾಡಿದ್ದರಿಂದ ಕಳೆದ ಆರೇಳು ತಿಂಗಳಿನಿಂದಲೇ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದ್ದರಿಂದ ರೈತರು ಹೆಚ್ಚಿನ ಹಣ ನೀಡಿ ತಮ್ಮ ಹೈನುಗಳಿಗೆ ಮೇವು ಖರೀದಿಸುವಂತಾಗಿದೆ. ನೀರಾವರಿ ಪ್ರದೇಶಗಳಾದ ತಿ.ನರಸೀಪುರ, ಕೊಳ್ಳೇಗಾಲ, ಯಳಂದೂರು ಹಾಗೂ ನಂಜನಗೂಡು ತಾಲೂಕುಗಳಿಂದ ಪ್ರತಿದಿನವೂ ನೂರಾರು ಕ್ವಿಂಟಾಲ್ ಮುಸುಕಿನ ಜೋಳದ ಮೇವನ್ನು ಖರೀದಿಸಿ ಟ್ರ್ಯಾಕ್ಟರ್, ಆಟೋಗಳ ಮೂಲಕ ಸಾಗಣೆ ಮಾಡುತ್ತಿದ್ದಾರೆ.
ಕೈಕೊಟ್ಟ ಮುಂಗಾರು:
ಪ್ರತಿ ವರ್ಷವೂ ಏಪ್ರಿಲ್ ಮೊದಲವಾರ ಪೂರ್ವಮುಂಗಾರು ಮಳೆ ಕೇರಳದಿಂದ ತಾಲೂಕಿನ ಮೂಲಕ ರಾಜ್ಯವನ್ನು ಪ್ರವೇಶಿಸುತ್ತದೆ. ಈ ವೇಳೆಗೆ ತಾಲೂಕಿನಾದ್ಯಂತ ರೈತರು ತಮ್ಮ ಜಮೀನುಗಳಲ್ಲಿ ಬಹುತೇಕ ಬಿತ್ತನೆ ಕಾರ್ಯಗಳು ಕೈಗೊಳ್ಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಏಪ್ರಿಲ್ ಕಳೆಯುತ್ತಾ ಬಂದರೂ ಮಳೆಬೀಳದ ಪರಿಣಾಮ ಬಿತ್ತನೆ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಶೇ.4 ರಷ್ಟು ಭಿತ್ತನೆಯಾಗಿಲ್ಲ. ಭಿತ್ತನೆ ಮಾಡಿದ ಬೆಳೆಗಳೂ ಬಿಸಿಲಿನ ತಾಪ ಹಾಗೂ ಮಳೆಯ ಕೊರತೆಯಿಂದ ಸಂಪೂರ್ಣ ನಾಶವಾಗಿವೆ. ಇದರಿಂದ ಈ ಬಾರಿ ಜಾನುವಾರುಗಳಿಗೆ ಮೇವಿನ ಕೊರತೆ ಕಾಡುತ್ತಿದೆ. ಕಬ್ಬಿನ ಸೋಗನ್ನು ಟ್ರ್ಯಾಕ್ಟರ್ ತುಂಬಿಸಿಕೊಂಡು ಬರುವಂತಾಗಿದೆ.
ಪ್ರತಿ ರಾಸಿಗೆ 5 ಕೆಜಿ ಮೇವು:
ಪಶುಪಾಲನೆ ಇಲಾಖೆ ಅಂಕಿ-ಅಂಶಗಳ ಪ್ರಕಾರ ತಾಲೂಕಿನಲ್ಲಿ ಇನ್ನೂ ಒಂದು ವಾರಕ್ಕೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಎನ್‌ಡಿ ಆರ್‌ಎಫ್ ಗೈಡ್‌ಲೈನ್ ಪ್ರಕಾರ ಪ್ರತಿ ರಾಸಿಗೆ 5 ಕೆಜಿಯಂತೆ ನೀಡಿದರೆ 3 ರಿಂದ 4 ವಾರಗಳವರೆಗೆ ಸಾಕಾಗುತ್ತದೆ. ಆದರೆ ಹಾಲು ಕರೆಯುವ ಹಸುಗಳು ಹಾಗೂ ಉಳುಮೆ ಮಾಡುವ ಎತ್ತುಗಳಿಗೆ ರೈತರು ಹೊಟ್ಟೆತುಂಬುವಷ್ಟು (ಕನಿಷ್ಠ 25 ರಿಂದ 30 ಕೆಜಿ) ಮೇವು ನೀಡುತ್ತಿದ್ದಾರೆ. ಇದರಿಂದ ರೈತರು ಬೇರೆ ಬೇರೆ ತಾಲೂಕುಗಳಿಂದ ಪ್ರತಿದಿನವೂ ಹತ್ತಾರು ಟ್ರ್ಯಾಕ್ತರ್‌ಗಳಲ್ಲಿ ಹಸಿ ಹಾಗೂ ಒಣ ಮೇವನ್ನು ಖರೀದಿಸುತ್ತಿರುವ ಪರಿಣಾಮ ರಸ್ತೆಗಳಲ್ಲಿ ಮೇವಿನ ವಾಹನಗಳ ಭರಾಟೆ ಜೋರಾಗಿದೆ.
ಹೈನುಗಾರಿಕೆ ಅವಲಂಬನೆ:
2021ರ ಜಾನುವಾರು ಗಣತಿಯ ಅಂಕಿ-ಅಂಶಗಳ ಪ್ರಕಾರ ತಾಲೂಕಿನಲ್ಲಿ 61176 ಹಸು ಎಮ್ಮೆಗಳು, 23558 ಕುರಿಗಳು, 24365 ಮೇಕೆಗಳಿವೆ. ಎಚ್.ಎಫ್. ತಳಿಯ ಹಸುಗಳನ್ನು ಬಿಟ್ಟರೆ ನಾಟಿ ಹಸು ಎಮ್ಮೆ ಆಡು ಮೇಕೆಗಳ ಮಾಲೀಕರು ತಮ್ಮ ರಾಸುಗಳ ಮೇವಿಗೆ ಗೋಮಾಳಗಳನ್ನು ಅವಲಂಬಿಸಿದ್ದಾರೆ. ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ ತಾಲೂಕಿನಲ್ಲಿ 26026.19 ಹೆಕ್ಟೇರ್ ಗೋಮಾಳವಿದೆ. ಕಾಡಂಚಿನ ಗ್ರಾಮಗಳಲ್ಲಿ ಸುಮಾರು ಸಾವಿರಾರು ಹೆಕ್ಟೇರ್ ಪ್ರದೇಶದ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ನೀಡಿದೆ. ಅಲ್ಲದೆ ಬಹುತೇಕ ಗೋಮಾಳಗಳು ಒತ್ತುವರಿಯಾಗಿವೆ. ಸಣ್ಣ ಹಾಗೂ ಮಧ್ಯಮವರ್ಗದ ರೈತರು ಕಾರ್ಮಿಕರ ಕೊರತೆ, ಬೆಳೆದ ಬೆಲೆಗಳಿಗೆ ಸಮರ್ಪಕ ಬೆಲೆ ದೊರಕದಿರುವುದು, ಮಳೆಯ ಕೊರತೆಯಿಂದ ಅಂತರ್ಜಲ ಮಟ್ಟ ಕುಸಿತ ಮುಂತಾದ ಕಾರಣಗಳಿಂದ ಕೃಷಿಗಿಂತಲೂ ಹೆಚ್ಚಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರತಿ ರೈತ ಕುಟುಂಬದಲ್ಲಿ ಒಂದೆರಡು ಹಸುಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ.
ಪಶುಪಾಲನಾ ಇಲಾಖೆಯಿಂದ ಪರಿಶೀಲನೆ:
ಮೇವಿನ ಕೊರತೆ ಎದುರಾಗುತ್ತಿರುವ ಹಿನ್ನೆಲೆ ಪಶುಪಾಲನಾ ಇಲಾಖೆ ಗ್ರಾಮಾಂತರ ಪ್ರದೇಶಗಳಲ್ಲಿ ಮೇವಿನ ಸಂಗ್ರಹದ ಬಗ್ಗೆ ಪರಿಶೀಲನೆ ಕೈಗೊಂಡಿದೆ. ನೀರಾವರಿ ವ್ಯವಸ್ತೆ ಹೊಂದಿರುವ ರೈತರು ಜಮೀನುಗಳಲ್ಲಿ ಮುಸುಕಿನ ಜೋಳ ಬೆಳೆದಿದ್ದು ಇನ್ನು ಕೆಲವರು ಒಣಮೇವನ್ನು ಸಂಗ್ರಹಿಸಿಟ್ಟಿದ್ದಾರೆ. ಮೇವಿನ ಸಂಗ್ರಹವಿದ್ದು ಮೇ ಅಂತ್ಯದೊಳಗೆ ಮಳೆ ಬೀಳದಿದ್ದರೆ ತೀವ್ರ ತೊಂದರೆ ಎದುರಾಗಲಿದೆ.
"

ಸಿಬ್ಬಂದಿ ಮೂಲಕ ಗ್ರಾಮಾಂತರ ಪ್ರದೇಶಗಳ ನೀರಾವರಿ ಜಮೀನುಗಳಲ್ಲಿ ಬೆಳೆದಿರುವ ಮೇವಿನ ಪ್ರಮಾಣವನ್ನು ಪರಿಶೀಲಿಸಲಾಗಿದೆ. ಮುಂದಿನ 5 ರಿಂದ 6 ವಾರಗಳವರೆಗೆ ಜಾನುವಾರುಗಳಿಗೆ ಮೇವು ಸಾಕಾಗುವಷ್ಟು ಇದೆ. ಆದರೆ ನೆರೆರಾಜ್ಯದ ರೈತರು ತಾಲೂಕಿನಲ್ಲಿ ಬೆಳೆದಿರುವ ಮುಸಿಕಿನ ಜೋಳದ ಮೇವನ್ನು ಖರೀದಿಸುತ್ತಿದ್ದಾರೆ. ಸ್ಥಳೀಯ ಹೈನುಗಾರರು ನೆರೆಯ ತಾಲೂಕುಗಳಿಂದ ಮೇವು ತರುವಂತಾಗಿದೆ. ಪ್ರತಿ ಸಭೆಯಲ್ಲಿಯೂ ನೆರೆರಾಜ್ಯಗಳಿಗೆ ಮೇವು ಸಾಗಾಣಿಕೆ ಮಾಡುವುದನ್ನು ನಿರ್ಬಂಧಿಸುವಂತೆ ಸಲಹೆ ನೀಡಲಾಗಿದೆ. ಬರ ಘೋಷಣೆ ಆಗದ ಕಾರಣ ಕಾರ್ಯಗತವಾಗಿಲ್ಲ. ಮೇ ನಂತರವೂ ಮಳೆಬೀಳದಿದ್ದರೆ ಮೇವು ಬ್ಯಾಂಕ್ ತೆರೆದು ಹೈನುಗಾರರಿಗೆ ರಿಯಾಯಿತಿ ದರದಲ್ಲಿ ಒಣಮೇವು ಪೂರೈಸಬೇಕಾಗುತ್ತದೆ.

— ಡಾ.ಮಾದೇಶ್ ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net