ಕಳೆದ ವರ್ಷ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಜಾನುವಾರುಗಳ ಮೇವಿನ ಮೂಲಗಳಾದ ಹುರುಳಿ, ನೆಲಗಡಲೆ, ಮುಸುಕಿನ ಜೋಳ ರಾಗಿಯನ್ನು ಭಿತ್ತನೆ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಇದಕ್ಕೂ ಮುನ್ನ ಭಿತ್ತನೆ ಮಾಡಿದ್ದ ಸೂರ್ಯಕಾಂತಿ, ಜೋಳ ಮುಂತಾದ ಬೆಳೆಗಳು ತೇವಾಂಶದ ಕೊರತೆ ಹಾಗೂ ಬಿಸಿಲಿನ ತಾಪಕ್ಕೆ ಬಾಡಿದ್ದರಿಂದ ಕಳೆದ ಆರೇಳು ತಿಂಗಳಿನಿಂದಲೇ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದ್ದರಿಂದ ರೈತರು ಹೆಚ್ಚಿನ ಹಣ ನೀಡಿ ತಮ್ಮ ಹೈನುಗಳಿಗೆ ಮೇವು ಖರೀದಿಸವಂತಾಗಿದೆ. ನೀರಾವರಿ ಪ್ರದೇಶಗಳಾದ ಟಿ.ನರಸೀಪುರ, ಕೊಳ್ಳೇಗಾಲ, ಯಳಂದೂರು ಹಾಗೂ ನಂಜನಗೂಡು ತಾಲೂಕುಗಳಿಂದ ಪ್ರತಿ ದಿನವೂ ನೂರಾರು ಕ್ವಿಂಟಾಲ್ ಮುಸುಕಿನ ಜೋಳದ ಮೇವನ್ನು ಖರೀದಿಸಿ ಟ್ರ್ಯಾಕ್ಟರ್, ಆಟೋಗಳ ಮೂಲಕ ಸಾಗಾಣೆ ಮಾಡುತ್ತಿದ್ದಾರೆ.