ಗುಂಡಾಲ್ ಜಲಾಶಯದ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಆರ್ ಮಂಜುನಾಥ್ ಶನಿವಾರ ಚಾಲನೆ ನೀಡಿದರು. ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರತಾಪ್, ಎಇ ಪ್ರತಾಪ್, ರೈತ ಮುಖಂಡರಾದ ಕೊಂಗರಹಳ್ಳಿ ಮಹೇಶ್, ಶಂಕರ್, ಗುರುಸ್ವಾಮಿ ಇದ್ದರು.
ಹನೂರು : ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರಿಗೂ ಸಮರ್ಪಕವಾಗಿ ನೀರಾವರಿ ಸೌಕರ್ಯವನ್ನು ಒದಗಿಸಲು ಕ್ರಮ ವಹಿಸುವುದಾಗಿ ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದ ಬಳಿ ಸಣ್ಣ ನೀರಾವರಿ ಇಲಾಖೆಯ 1.5 ಕೋಟಿ ರೂ ವೆಚ್ಚದಲ್ಲಿನ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಗುಂಡಾಲ್ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ರೈತರು ಕೃಷಿ ಮಾಡುತ್ತಿದ್ದಾರೆ. ಈ ಜಲಾಶಯಕ್ಕೆ ಮಳೆಗಾಲದ ವೇಳೆ ಹೆಚ್ಚಿನ ನೀರು ಹರಿದು ಬರುತ್ತದೆ. ಜತೆಗೆ ಏತ ನೀರಾವರಿ ಯೋಜನೆಯ ಮೂಲಕವೂ ಕಾವೇರಿ ನದಿ ಮೂಲದಿಂದ ನೀರು ಬರುತ್ತಿದೆ. ಆದರೆ ಹಲವು ವರ್ಷಗಳಿಂದ ಜಲಾಶಯದಿಂದ ಹಾದು ಹೋಗುವ ಕೆಲವು ಕಡೆಗಳಲ್ಲಿ ನಾಲೆಗಳು
ಶಿಥಿಲವಾಗಿದ್ದವು. ಹೂಳು ತುಂಬಿಕೊಂಡು ಕೆಲ ಜಮೀನುಗಳಿಗೆ ನೀರು ಹರಿಯಲು ತೊಡಕಾಗಿ ಪರಿಣಮಿಸಿತ್ತು. ರೈತರು ನಾಲೆಗಳನ್ನು ಅಭಿವೃದ್ಧಿ ಪಡಿಸಿ ನೀರಾವರಿ ಸೌಕರ್ಯವನ್ನು ಒದಗಿಸುವಂತೆ ಮನವಿ ಮಾಡಿದ್ದರು. ಇದನ್ನು ಮನಗಂಡು 1.50 ಕೋಟಿ ರೂ ವೆಚ್ಚದಲ್ಲಿ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ನೀರಾವರಿ ಸೌಕರ್ಯದಿಂದ ವಂಚಿತವಾಗಿದ್ದ ಸುಮಾರು 300 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ಜಲ ಸೌಕರ್ಯ ಸಿಗಲಿದೆ
ಜವಾಬ್ದಾರಿ ಹೊತ್ತವರು ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ರೈತರಿಗೆ ನೀರಾವರಿ ಸೌಕರ್ಯ ಒದಗಿಸಬೇಕು ಎಂದು
ಶಾಸಕರು ತಾಕೀತು ಮಾಡಿದರು.
ನಾಲೆಗಳ ಅಭಿವೃದ್ಧಿ ಹಾಗೂ ನಿರ್ವಹಣೆ ವಿಚಾರದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ರೈತರೂ ಕೈಜೋಡಿಸಬೇಕು. ಇದರಿಂದ ಸಮರ್ಪಕವಾಗಿ ನೀರು ಹರಿಯಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರತಾಪ್, ಎಇ ಪ್ರತಾಪ್, ರೈತ ಮುಖಂಡರಾದ ಕೊಂಗರಹಳ್ಳಿ ಮಹೇಶ್, ಶಂಕರ್, ಗುರುಸ್ವಾಮಿ, ಶಿವಮಲ್ಲು, ಸದಾಶಿವ, ಸೋಮಣ್ಣ, ಶಿವರುದ್ರ, ಚಿನ್ನಸ್ವಾಮಿ ಹಾಗೂ ಇನ್ನಿತರರು ಇದ್ದರು.