ಬಸ್‌ಗಳು ನಿಲ್ಲಿಸದೆ ವಿದ್ಯಾರ್ಥಿಗಳಿಗೆ ತೊಂದರೆ

ಕೌದಳ್ಳಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ನಿಲ್ಲಿಸದೇ ತೆರಳುತ್ತಿದ್ದು, ವಿದ್ಯಾರ್ಥಿಗಳು ಕಾದು ನಿಂತು ತೊಂದರೆ ಅನುಭವಿಸಿದರು.
ಕೌದಳ್ಳಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ನಿಲ್ಲಿಸದೇ ತೆರಳುತ್ತಿದ್ದು, ವಿದ್ಯಾರ್ಥಿಗಳು ಕಾದು ನಿಂತು ತೊಂದರೆ ಅನುಭವಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • Buses not stopping
ಹನೂರು: ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಸೋಮವಾರ ಸಾರಿಗೆ ಬಸ್‌ಗಳು ನಿಲ್ಲಿಸದ ಪರಿಣಾಮ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ನಿಂತು ತೊಂದರೆ ಅನುಭವಿಸಿದರು.
ಮ.ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಾದ ಕೌದಳ್ಳಿ ಸಮೀಪದ ಕುರಟ್ಟಿ ಹೊಸೂರು, ಭದ್ರಯ್ಯನಹಳ್ಳಿ, ಶೆಟ್ಟಳ್ಳಿ, ದಂಟಳ್ಳಿ, ಅರಬಗೆರೆ ಹಾಗೂ ಈ ಭಾಗದ ಇನ್ನಿತರ ಗ್ರಾಮದ ವಿದ್ಯಾರ್ಥಿಗಳು ಹನೂರು ಹಾಗೂ ಕೊಳ್ಳೇಗಾಲದ ಶಾಲಾ, ಕಾಲೇಜಿಗೆ ತೆರಳುತ್ತಾರೆ. ಆದರೆ ಈ ಭಾಗದಿಂದ ಸಮರ್ಪಕ ಬಸ್ ಸೌಕರ್ಯವಿಲ್ಲ. ಈಗಿರುವಾಗ ಶಾಲೆ, ಕಾಲೇಜಿಗೆ ತೆರಳಲು ಸೋಮವಾರ ಬೆಳಗ್ಗೆ 7 ಗಂಟೆಗೆ ಕೌದಳ್ಳಿ ಬಸ್ ನಿಲ್ದಾಣಕ್ಕೆ ಈ ಭಾಗದ ಸುಮಾರು 40ಕ್ಕೂ ವಿದ್ಯಾರ್ಥಿಗಳು ಆಗಮಿಸಿದ್ದರು. ಜತೆಗೆ ಕೌದಳ್ಳಿ ಸೇರಿದಂತೆ ಆಸುಪಾಸಿನ ವಿದ್ಯಾರ್ಥಿಗಳು ನೆರೆದಿದ್ದರು. ಆದರೆ ಅಮಾವಾಸ್ಯೆ ಹಿನ್ನೆಲೆ ಕಿಕ್ಕಿರಿದು ತುಂಬಿದ್ದ ಮ.ಬೆಟ್ಟದಿಂದ ಆಗಮಿಸುತ್ತಿದ್ದ ಯಾವುದೇ ಬಸ್‌ಗಳು ನಿಲ್ಲಿಸಲಿಲ್ಲ. ಇದು 9 ಗಂಟೆಯವರೆಗೂ ನಡೆಯಿತು. ಇದರಿಂದ ವಿದ್ಯಾರ್ಥಿಗಳು ಬಸ್ಸಿಗಾಗಿ ಪರದಾಡಿದರು. ಗಂಟೆಗಟ್ಟಲೇ ಕಾದು ನಿಂತು ತೊಂದರೆ ಅನುಭವಿಸಿದರು. ಶಾಲಾ, ಕಾಲೇಜಿನ ಅವಧಿ ಮೀರಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ತಮ್ಮ ಊರಿಗೆ ವಾಪಸಾದರು. ಸಾರಿಗೆ ಇಲಾಖೆಯ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾರಿಗೆ ಇಲಾಖೆಯ ಘಟಕ ವ್ಯವಸ್ಥಾಪಕರು ಹಾಗೂ ಶಾಸಕರು ಈ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯವನ್ನು ಒದಗಿಸುವಂತೆ ಒತ್ತಾಯಿಸಲಾಗಿದೆ.
ಬಸ್ ಸೌಕರ್ಯಕ್ಕೆ ಒತ್ತಾಯ: ಕುರಟ್ಟಿ ಹೊಸೂರು ಭಾಗದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊಳ್ಳೇಗಾಲದ ಶಾಲಾ, ಕಾಲೇಜಿಗೆ ತೆರಳುತ್ತಾರೆ. ಆದರೆ ಈ ಭಾಗದಲ್ಲಿ ಬೆಳಗ್ಗೆ ಸಂಚರಿಸುವ ಸಾರಿಗೆ ಬಸ್ಸೊಂದು ಕೌದಳ್ಳಿ ತನಕ ತೆರಳಿ ಮತ್ತೇ ವಾಪಸಾಗುತ್ತದೆ. ಕೌದಳ್ಳಿಯಿಂದ ಕೊಳ್ಳೇಗಾಲಕ್ಕೆ ತೆರಳಬೇಕಾದರೆ ವಿದ್ಯಾರ್ಥಿಗಳು ನಿತ್ಯ ಕಾದು ನಿಲ್ಲಬೇಕಿದೆ. ಜತೆಗೆ ಮ.ಬೆಟ್ಟದಲ್ಲಿ ನಡೆಯುವ ಜಾತ್ರೆ ಹಾಗೂ ಅಮಾವಾಸ್ಯೆ ವೇಳೆ ಕೌದಳ್ಳಿಯಲ್ಲಿ ಬಸ್‌ಗಳು ನಿಲ್ಲಿಸುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುರಟ್ಟಿ ಹೊಸೂರು ಭಾಗದಿಂದ ಕೊಳ್ಳೇಗಾಲಕ್ಕೆ ಪ್ರತ್ಯೇಕ ಬಸ್ ಬಿಡುವಂತೆ ಕುರಟ್ಟಿ ಹೊಸೂರು ಗ್ರಾಮದ ಬಸವಣ್ಣ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net