ನಗರಸಭೆಯಲ್ಲಿ ಇ-ಸ್ವತ್ತು ಮಾಡಿಸಿಕೊಡುವ ದಲ್ಲಾಳಿಗಳ ಹಾವಳಿ ವಿಪರೀತವಾಗಿದೆ. ಮಧ್ಯವರ್ತಿಗಳ ಕಡೆಯಿಂದ ಬಂದರೆ ಮಾತ್ರ ಕೆಲಸ ಆಗುತ್ತದೆ ಎನ್ನುವ ಪದ್ಧತಿ ರೂಢಿಯಾಗಿ ಹೋಗಿದೆ. ಕೆಲವರು ದಲ್ಲಾಳಿಗಳ ಕೆಲಸವನ್ನು ಖಾಯಂ ಉದ್ಯೋಗ ಮಾಡಿಕೊಂಡಿಬಿಟ್ಟಿದ್ದಾರೆ. ದಿನ ಬೆಳಗಾದರೆ ನಗರಸಭೆಗೆ ಇವರ ಭೇಟಿ ಇದ್ದೇ ಇರುತ್ತದೆ. ಕೆಲ ವರ್ಷಗಳ ಹಿಂದೆ ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಣ ಮಾಡಲು ಸಂದರ್ಶಕರ ಹೆಸರು, ವಿಳಾಸ, ಭೇಟಿಯ ಕಾರಣವನ್ನು ಬರೆದುಕೊಳ್ಳಲಾಗುತ್ತಿತ್ತು. ಈ ಸಂದರ್ಭದಲ್ಲಿ ಬೇರೆಯವರಿಗೆ ಇ-ಸ್ವತ್ತು ಮಾಡಿಸಿಕೊಡಲು ನಗರಸಭೆ ಯಾರು, ಯಾವ ಕಾರಣಕ್ಕೆ ಬರುತ್ತಾರೆ ಎನ್ನುವುದು ಗೊತ್ತಾಗುತ್ತಿತ್ತು. ದಿನಕಳೆದಂತೆ ಈ ವ್ಯವಸ್ಥೆಯನ್ನು ಕೈಬಿಡಲಾಯಿತು. ದಲ್ಲಾಳಿಗಳಿಗೆ ರತ್ನಗಂಬಳಿ ಹಾಕಿದಂತಾಯಿತು. ನಗರಸಭೆಗೆ ಬರುವ ಸಾರ್ವಜನಿಕರಿಗೆ ಆಸ್ತಿ ದಾಖಲೆಗಳ ಕುರಿತು ಮಾಹಿತಿ ಪಡೆಯಲು, ಕೆಲಸ ಕಾರ್ಯಗಳನ್ನು ಎಲ್ಲಿ, ಹೇಗೆ ಮಾಡಿಸಿಕೊಳ್ಳಬೇಕೆಂಬ ಮಾಹಿತಿಯನ್ನು ತಿಳಿಸಲು ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕಾಗಿದೆ. ದಲ್ಲಾಳಿಗಳ ಕಡೆಯಿಂದ ಬಂದ ಸಾರ್ವಜನಿಕರಿಗೆ ಅರಿವು ಮೂಡಿಸಿ ಸಕಾಲಕ್ಕೆ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟರೆ ವಿಶ್ವಾಸ ಮೂಡುತ್ತದೆ.