ನಿಷೇಧಿತ ಕ್ವಾರಿಯಲ್ಲಿ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದ ನಿಷೇಧಿತ ಕ್ವಾರಿಯ ನೀರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಾಲೂಕಿನ ಹಂಗಳ ಗ್ರಾಮದ ಮಂಜು ಬಿನ್ ಚನ್ನಬಸಪ್ಪ(55) ಮೃತರು. ಸೋಮವಾರ ಬೆಳಗ್ಗೆ ಕ್ವಾರಿಯ ನೀರಿನಲ್ಲಿ ಮೃತದೇಹ ಇರುವುದನ್ನು ನೋಡಿದ ದನಗಾಹಿಗಳಿಂದ ವಿಷಯ ತಿಳಿದ ಸುತ್ತಮುತ್ತಲಿನ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಕೆಲ ದಿನಗಳ ಹಿಂದೆ ಇದೇ ಕ್ವಾರಿಯಲ್ಲಿ ಮಲ್ಲಯ್ಯನಪುರ ಗ್ರಾಮದ ಯುವಕನ ಮೃತದೇಹ ಪತ್ತೆಯಾಗಿತ್ತು.
ಬೋರಲಾಗಿ ನೀರಿನಲ್ಲಿ ತೇಲುತ್ತಿದ್ದ ಮೃತದೇಹದ ಬೆನ್ನಿನಲ್ಲಿ ಗಾಯದ ಗುರ್ತು ಕಂಡುಬಂದಿತ್ತು. ಇದ್ದರಿಂದ ಕೊಲೆ ಮಾಡಿ ನೀರಿಗೆ ಬೀಸಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಸ್ಥಳೀಯ ಈಜುಗಾರರು ಮೃತದೇಹ ಹೊರತಂದ ನಂತರ ಪೊಲೀಸರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ ಎಂದು ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಆತ್ಮಹತ್ಯೆ: ಮರದ ವ್ಯಾಪಾರದ ಮೂಲಕ ಜೀವನ ನಡೆಸುತ್ತಿದ್ದ ಮಂಜು ಅವರಿಗೆ ಈಚೆಗೆ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net