30ರಂದು ಬಿಳಿಗಿರಿ ರಂಗನ ಬ್ರಹ್ಮರಥೋತ್ಸವ

ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಅತಿಗಣ್ಯರ ಅತಿಥಿಗೃಹದಲ್ಲಿ ದೊಡ್ಡ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು. ಜಿಲ್ಲಾಧಿಕಾರಿ ಶ್ರೀರೂಪಾ ಸೇರಿದಂತೆ ಇತರರು ಇದ್ದರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಅತಿಗಣ್ಯರ ಅತಿಥಿಗೃಹದಲ್ಲಿ ದೊಡ್ಡ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು. ಜಿಲ್ಲಾಧಿಕಾರಿ ಶ್ರೀರೂಪಾ ಸೇರಿದಂತೆ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ಸೂಚನೆ
  • ಎಆರ್‌ಕೆ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ(ದೊಡ್ಡ ಜಾತ್ರೆ) ಏ. 30ರಂದು ಜರುಗಲಿದ್ದು, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಜಾತ್ರೆಗೆ ಯಾವುದೇ ತೊಡಕಾಗದಂತೆ ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಎ. ಆರ್. ಕೃಷ್ಣಮೂರ್ತಿ ಸೂಚನೆ ನೀಡಿದರು.
ಬಿಳಿಗಿರಿರಂಗನ ಬೆಟ್ಟದಲ್ಲಿನ ಅತಿಗಣ್ಯರ ಅತಿಥಿಗೃಹದಲ್ಲಿ ಶನಿವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬೆಟ್ಟಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಈಗ ಬೇಸಿಗೆ ಕಾಲವಾಗಿದ್ದು ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಇದಕ್ಕಾಗಿ ಕುಡಿಯುವ ನೀರಿನ ಸಂಚಾರಿ ವಾಹನಗಳ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚನೆ ನೀಡಿದರು.
ಈ ಬಾರಿ ಜಾತ್ರೆಗೆ ಬರುವ ಭಕ್ತರಿಗೆ ಸಂಸದ ಆರ್. ಸುನಿಲ್ ಬೋಸ್ ಅವರಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಇಲ್ಲಿ ನೀಡುವ ಪ್ರಸಾದ ವ್ಯವಸ್ಥೆಗೆ ಯಾವುದೇ ಚುತಿ ಬರದಂತೆ ಎಚ್ಚರಿಕೆ ವಹಿಸಬೇಕು.
ಕೆಎಸ್‌ಆರ್‌ಟಿಸಿ ವತಿಯಿಂದ ನೂರು ಬಸ್‌ಗಳ ವ್ಯವಸ್ಥೆಯನ್ನು ಮಾಡಬೇಕು, ಅನುಭವಿ ಚಾಲಕರು ಮಾತ್ರ ಬೆಟ್ಟಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಬಾರಿ ಬಿಸಿಲಿನ ಬೇಗೆ ಅಧಿಕವಾಗಿದ್ದು ಪ್ರಯಾಣಿಕರು ಬಿಸಿಲಿನಲ್ಲಿ ನಿಲ್ಲದಂತೆ ಅಲ್ಲಲ್ಲಿ ಶಾಮಿಯಾನದ ವ್ಯವಸ್ಥೆಯನ್ನು ಮಾಡಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಟ್ಟಕ್ಕೆ ಯಳಂದೂರು ಮಾರ್ಗವಾಗಿ ತೆರಳುವ ರಸ್ತೆಯಲ್ಲಿ ಅಲ್ಲಲ್ಲಿ ಕಂದಕಗಳು ಬಿದ್ದಿವೆ, ಇದನ್ನು ಕಳೆದ ಚಿಕ್ಕಜಾತ್ರೆಯಲ್ಲೂ ಮುಚ್ಚಿಸುವಂತೆ ನಾನು ಸೂಚನೆ ನೀಡಿದ್ದೆ, ಆದರೆ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಇದನ್ನು ಕೂಡಲೇ ದುರಸ್ತಿ ಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದರು.
ರೇಷ್ಮೆ ಇಲಾಖೆಯ ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಲು ಅನುವು ಮಾಡಿಕೊಡಬೇಕು, ಈ ಬಗ್ಗೆ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು, ಜಾತ್ರೆಯಲ್ಲಿ ಶುಚಿತ್ವಕ ಹೆಚ್ಚಿನ ಆದ್ಯತೆ ನೀಡಬೇಕು, ಇದಕ್ಕೆ ಯಳಂದೂರು ಪಟ್ಟಣ ಪಂಚಾಯಿತಿ, ಹನೂರು, ಕೊಳ್ಳೇಗಾಲ ಹಾಗೂ ಶ್ರೀಮಲೆ ಮಹದೇಶ್ವರ ಬೆಟ್ಟದಿಂದ ಪೌರಕಾರ್ಮಿಕರು ಹಾಗೂ ಕಸ ವಿಲೇವಾರಿ ಮಾಡುವ ವಾಹನಗಳನ್ನು ಬಳಸಿಕೊಂಡು ಶುಚಿತ್ವಕ್ಕೆ ಆದ್ಯತೆ ನೀಡಲು ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಆಗದಂತೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿಯನ್ನು ನೀಡಬೇಕು ಅರಣ್ಯ ಇಲಾಖೆಯವರು ವಿನಾಕಾರಣ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಹಾಗೂ ಜಾತ್ರೆಯ ಕೆಲಸಗಳಿಗೆ ತೊಂದರೆ ಕೊಡಬಾರದು ಎಂದು ಸೂಚಿಸಿದರು.
ಜಾತ್ರೆಯು ನಿಗದಿತ ಸಮಯಕ್ಕೆ ನಡೆಯುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವನ್ನು ವಹಿಸಬೇಕು. ಇಂತಹ ಸಭೆಗಳಿಗೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಯಾವುದೇ ಸಬೂಬು ನೀಡದೆ ಹಾಜರಿರಬೇಕು ಎಂದು ಎಚ್ಚರಿಕೆ ನೀಡಿದ ಪ್ರಸಂಗವು ಜರುಗಿತು.
ಈ ಬಾರಿಯೂ ಸೆಸ್ಕ್ ವತಿಯಿಂದ ವಿಶೇಷ ವಿದ್ಯುತ್ ದೀಪಲಂಕಾರವನ್ನು ಮಾಡಬೇಕು, ಯಳಂದೂರು ಪಟ್ಟಣದಲ್ಲಿ ಪ್ರತ್ಯೇಕವಾಗಿ ಜಾತ್ರೆಗೆ ತೆರಳುವ ಭಕ್ತರಿಗೆ ಬಸ್ ನಿಲ್ದಾಣದ ರಸ್ತೆಯನ್ನು ಮಾಡಬೇಕು, ಬೆಟ್ಟದಲ್ಲಿ ಕೆಲವು ಕಡೆ ಏಕಮುಖ ಸಂಚಾರವನ್ನು ಮಾಡಿ ಬರುವ ಭಕ್ತರ ವಾಹನಗಳಿಗೆ ಸುಗಮ ಸಂಚಾರಕ್ಕೆ ಅವಕಾಶವನ್ನು ಮಾಡಿಕೊಡಬೇಕು. ಸಂಬಂಧಪಟ್ಟ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಶ್ರೀರೂಪಾ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ತಹಸೀಲ್ದಾರ್ ಎಸ್. ಎಲ್. ನಯನಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಚ್.ವಿ. ಚಂದ್ರು ಜಿ.ಪಂ. ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭು ಪ್ರಸಾದ್ , ಬಿಳಿಗಿರಿ ರಂಗನಾಥ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಸದಸ್ಯರಾದ ಗುಂಬಳ್ಳಿ ರಾಜಣ, ಕೇತಮ್ಮ, ಸ್ಪೂರ್ತಿ, ವೆಂಕಟರಾಮು, ಸಿದ್ದರಾಜು, ಸುರೇಶ್, ನಾರಾಯಣಸ್ವಾಮಿ, ರವಿಕುಮಾರ್ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ , ಪಾರುಪತ್ತೆದಾರ ರಾಜು, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net