ಬಿಳಿಗಿರಿರಂಗನಬೆಟ್ಟದಲ್ಲಿ ಚಿಕ್ಕ ರಥೋತ್ಸವ ಸಂಪನ್ನ

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ನಡೆದ ಚಿಕ್ಕ ಜಾತ್ರೆಯಲ್ಲಿ ತೇರನ್ನು ಎಳೆಯುತ್ತಿರುವ ಸಾವಿರಾರು ಭಕ್ತರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ನಡೆದ ಚಿಕ್ಕ ಜಾತ್ರೆಯಲ್ಲಿ ತೇರನ್ನು ಎಳೆಯುತ್ತಿರುವ ಸಾವಿರಾರು ಭಕ್ತರು.
Published on
ಯಳಂದೂರು: ತಾಲೂಕಿನ ಐತಿಹಾಸಿಕ ಪುರಾಣ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ವೈಭವಯುತವಾಗಿ ಚಿಕ್ಕ ರಥೋತ್ಸವ ಜರುಗಿತು. ಸಾವಿರಾರು ಭಕ್ತರು ಈ ಉತ್ಸವದಲ್ಲಿ ಭಾಗವಹಿಸುವ ಮೂಲಕ ಭಕ್ತಿ ಭಾವ ಮೆರೆದರು.
ಮುಂಜಾನೆಯಿಂದಲೇ ದೇವರಿಗೆ ಕಲ್ಯಾಣೋತ್ಸವ, ಮುಯ್ಯಿ ಸಮರ್ಪಣೆ ನಂತರ ಪವಿತ್ರ ಚಿನ್ನಾಭರಣವನ್ನು ತೊಡಿಸಲಾಯಿತು.
ಅಲಂಕೃತ ಉತ್ಸವಮೂರ್ತಿಯನ್ನು ವಿವಿಧ ಬಣ್ಣ, ಬಣ್ಣದ ಪಟಗಳು, ಪುಷ್ಪದಿಂದ ಅಲಂಕೃತವಾದ ತೇರಿನಲ್ಲಿ 11.56 ರ ಸಮಯದಲ್ಲಿ ಪ್ರತಿಷ್ಠಾಪಿಸಲಾಯಿತು. ಪ್ರತಿ ತೇರಿನ ಸಂದರ್ಭದಲ್ಲೂ ಬರುವಂತೆ ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿತು. ಇದೇ ಸಂದರ್ಭದಲ್ಲಿ ನೆರೆದಿದ್ದ ರಂಗಪ್ಪನ ದಾಸ ಭಕ್ತರು ಶಂಖ, ಜಾಗಟೆ, ನಾದಸ್ವರದ ಸಪ್ಪಳದೊಂದಿಗೆ ಗೋವಿಂದ ನಾಮಾವಳಿಯನ್ನು ಹಾಡಿದರು. ಸಾವಿರಾರು ಭಕ್ತರು ತೇರು ಎಳೆದು ಸಂಭ್ರಮಿಸಿದರು. ತಾವು ಬೆಳೆದಿದ್ದ ದವಸ ಧಾನ್ಯ, ಚಿಲ್ಲರೆ ಕಾಸು ಸಮರ್ಪಣೆ ಮಾಡಿದರು.
ನವದಂಪತಿಗಳು ಹಣ್ಣು, ಜವನ ಎಸೆದು ಧನ್ಯತೆ ಮೆರೆದರು. ಕೆಲವರು ಪೆಪ್ಪರ್‌ಮೆಂಟ್, ಚಾಕ್ಲೆಟ್‌ಗಳನ್ನೂ
ತೇರಿಗೆ ಎಸೆದಿದ್ದು ವಿಶೇಷವಾಗಿತ್ತು. ದೇಗುಲದ ಒಂದು ಸುತ್ತ ಪ್ರದಕ್ಷಿಣೆ ಹಾಕಿದ ಚಿಕ್ಕತೇರು ಮತ್ತೆ ಸ್ವಸ್ಥಾನಕ್ಕೆ ಸೇರಿತು. ನಂತರ ಚಿನ್ನಾಭರಣಗಳಿಂದ ಅಲಂಕೃತವಾದ ಉತ್ಸವ ಮೂರ್ತಿಯನ್ನು ಮಂಟಪೋತ್ಸವಕ್ಕೆ ಕರೆದೊಯ್ಯಲಾಯಿತು. ಇದಾದ ಬಳಿ ಭಕ್ತರು ಬಿಳಿಗಿರಿಂಗನಾಥಸ್ವಾಮಿ, ಅಲಮೇಲು ರಂಗನಾಯಕಿ ಅಮ್ಮನವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತು.
ಬ್ಯಾಟೆಮನೆ ಸೇವೆ ಮಾಡಿದ ಭಕ್ತಗಣ
ರಂಗನಾಥನ ರಥೋತ್ಸವದ ಈ ವೇಳೆ ದಾಸಂದಿರು. ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮನೆ ಸೇವೆ ಹಾಕುವ ಸಂಪ್ರದಾಯವಿದೆ. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಪರಾಕ್, ಬೋಪರಾಕ್ ಎಂದು ಕೂಗುವ ವಿಶಿಷ್ಟವಾದ ಆಚರಣೆಗೆ ಚಿಕ್ಕ ಜಾತ್ರೆ ಸಾಕ್ಷಿಯಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನವನ್ನು ಪಡೆದರು. ದೇವರನ್ನು ಮೈಸೂರಿನ ಮಹಾರಾಜರು ನೀಡಿರುವ ಕಿರೀಟ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ನಂತರ ಭಕ್ತರು ಇಲ್ಲಿರುವ ದೇವರ ದೊಡ್ಡ ಪಾದುಕೆಗಳಿಂದ ತಲೆಗೆ ಹೊಡಿಸಿಕೊಳ್ಳುವ ಮೂಲಕ ಭಕ್ತಿ ಮೆರೆದರು.
*
ವಾಹನ ದಟ್ಟಣೆ ಕಡಿಮೆ ಇತ್ತು
ಈ ಬಾರಿಯ ರಥೋತ್ಸವಕ್ಕೆ ಬೆಟ್ಟಕ್ಕೆ ದ್ವಿಚಕ್ರವಾಹನ ಪ್ರವೇಶ ನಿಷೇಧಿಸಲಾಗಿತ್ತು. ಗುಂಬಳ್ಳಿ ಚೆಕ್ ಪೋಸ್ಟ್‌ನಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೂ ಕೂಡ ಕೆಲವು ದ್ವಿ ಚಕ್ರ ವಾಹನಗಳು ಸಂಚರಿಸಿದ್ದು ಅಚ್ಚರಿ ಮೂಡಿಸಿತು. ಇಲ್ಲಿಂದ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಬೆಟ್ಟದಲ್ಲಿ ಏಟ್ರಿ ಸಂಸ್ಥೆಯ ಬಳಿ ಹಾಗೂ ರೇಷ್ಮೆ ಇಲಾಖೆಯ ಬಳಿ ಖಾಸಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಬೆಟ್ಟದ ಕಮರಿ ಮೇಲಿರುವ ದೇಗುಲದ ಸಮೀಪ ವಾಹನ ದಟ್ಟಣೆ ಕಡಿಮೆ ಇತ್ತು.
ಹದಗೆಟ್ಟ ರಸ್ತೆ, ಸವಾರರ ಪರದಾಟ:
ಪಟ್ಟಣದಿಂದ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ರಸ್ತೆಯ ಬದಿಯಲ್ಲಿ ಮಳೆಯಿಂದ ಮಣ್ಣು ಕುಸಿದಿದ್ದು ಇದಕ್ಕೆ ಬೆಟ್ಟದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ದುರಸ್ತಿ ಪಡಿಸುವಂತೆ ಮನವಿ ಮಾಡಲಾಗಿತ್ತು. ಶಾಸಕರೂ ಇದನ್ನು ದುರಸ್ತಿ ಮಾಡಬೇಕು. ಕಲ್ ಪಿಚ್ಚಿಂಗ್ ಮಾಡಬೇಕು. ರಸ್ತೆ ಬದಿಯಲ್ಲಿ ದೊಡ್ಡ, ದೊಡ್ಡಹಳ್ಳವಾಗಿದ್ದು ಇದಕ್ಕೆ ಮಣ್ಣು ಮುಚ್ಚಬೇಕು ಎಂದು ಸೂಚನೆ ನೀಡಿದ್ದರು
ಆದರೂ ಕೂಡ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನೆಪಮಾತ್ರಕ್ಕೆ ಕೆಲವೆಡೆ ಮಾತ್ರ ಮಣ್ಣು ಮುಚ್ಚಿದ್ದರು. ಹಾಗಾಗಿ ಬಸ್‌ಗಳು ಹಾಗೂ ಕಾರುಗಳು ಸಾಗಲು ಪ್ರಯಾಸ ಪಡುವ ಸ್ಥಿತಿ ಶುಕ್ರವಾರ
ನಿರ್ಮಾಣವಾಗಿತ್ತು. ಶಾಸಕರ ಮಾತಿಗೂ ಕಿಮ್ಮತ್ತಿಲ್ಲವೇ ಎಂದು ಭಕ್ತರ ತಮ್ಮ ಆಕ್ರೋಶ ಹೊರ ಹಾಕಿದರು. ಕೆಲ ಬಸ್‌ಗಳು ಕೆಟ್ಟು ನಿಂತಿದ್ದ ದೃಶ್ಯವೂ ಅಲ್ಲಲ್ಲಿ ಗೋಚರಿಸಿತು. ಅಧಿಕಾರಿಗಳ ನಿರ್ಲಕ್ಷೃವೇ ದಕ್ಕೆ ಕಾರಣವಾಗಿದ್ದು, ಮುಂದೆ ಇದನ್ನು ಸರಿಪಡಿಸುವಂತೆ ಭಕ್ತರು ಆಗ್ರಹಿಸಿದರು.
*
ಬಸ್ ನಿಲ್ದಾಣದಲ್ಲಿ ಪರದಾಟ:
ಶುಕ್ರವಾರ ಬೆಳಗ್ಗೆ ಪಟ್ಟಣದಿಂದ ಬೆಟ್ಟಕ್ಕೆ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು. ಹಾಗಾಗಿ ತೇರು ನಡೆಯುವ ಒಳಗೆ ಬೆಟ್ಟಕ್ಕೆ ತೆರಳಲು ಭಕ್ತರು ಪ್ರಯಾಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು. ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡಿರಲಿಲ್ಲ. ನಾಡಮೇಗಲಮ್ಮ ದೇಗುಲದ ಬಳಿ ನಿಲ್ದಾಣ ಇರುತ್ತಿತ್ತು. ಹಾಗಾಗಿ ಇಲ್ಲಿ ಬಸ್ ನಿಲ್ಲುತ್ತದೆ ಎಂದು ಕೆಲವರು ಅಲ್ಲಿಗೆ ಹೋಗಿ ವಾಪಸ್ಸು ಬಸ್ ನಿಲ್ದಾಣಕ್ಕೆ ಬರುತ್ತಿದ್ದ ದೃಶ್ಯ ಕಂಡು ಬಂತು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಜಿ ಶಾಸಕರಾದ ಎನ್. ಮಹೇಶ್, ಎಸ್. ಬಾಲರಾಜು. ಜಿಲ್ಲಾಧಿಕಾರಿ
ಶ್ರೀರೂಪಾ, ಉಪ ವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ತಹಸೀಲ್ದಾರ್ ಎಸ್.ಎಲ್. ನಯನ, ಡಿವೈಎಸ್‌ಪಿ ಧರ್ಮೇಂದ್ರ, ಸಿಪಿಐ ಸುಬ್ರಹ್ಮಣ್ಯ, ಶಿವಮಾದಯ್ಯ, ಪಿಎಸ್‌ಐ ಆಕಾಶ್, ಕರಿಬಸಪ್ಪ ದೇಗುಲದ ಇಒ ಸುರೇಶ್, ಪಾರುಪತ್ತೇಗಾರ ರಾಜು, ಪ್ರಧಾನ ಅರ್ಚಕ ಎ.ಆರ್. ರವಿಕುಮಾರ್, ಎಸ್. ನಾಗೇಂದ್ರ ಭಟ್, ದೇಗುಲದ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net