ಹನೂರಿನ ಅಗ್ನಿಶಾಮಕ ಠಾಣಾ ಆವರಣದಲ್ಲಿ ಎಂ.ಜಿ ದೊಡ್ಡಿ ಗ್ರಾಮದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಅಗ್ನಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ನಡೆಯಿತು. ಮಹೇಶ್, ಆನಂದ್, ದೀಪಕ್ ಇತರರಿದ್ದರು.
ಹನೂರು: ಮನೆಗಳಲ್ಲಿ ಬೆಂಕಿ ಅವಘಡಗಳು ಸಂಭವಿಸದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವುದರ ಜತೆಗೆ ನಂದಿಸುವ ವಿಧಾನವನ್ನು ತಿಳಿದುಕೊಳ್ಳಬೇಕು ಎಂದು ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್ ತಿಳಿಸಿದರು.
ಪಟ್ಟಣದ ಆರ್.ಎಸ್. ದೊಡ್ಡಿ ಬಳಿಯ ಅಗ್ನಿಶಾಮಕ ಠಾಣಾ ಆವರಣದಲ್ಲಿ ಶುಕ್ರವಾರ ಎಂ.ಜಿ. ದೊಡ್ಡಿ ಗ್ರಾಮದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಅಗ್ನಿ ಸುರಕ್ಷತೆ ಕುರಿತು ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಮಾತನಾಡಿದರು.
ಮನೆಗಳಲ್ಲಿ ಮಹಿಳೆಯರು ಅಡುಗೆ ತಯಾರಿಸುವುದು ಸಾಮಾನ್ಯ. ಈ ವೇಳೆ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಗ್ಯಾಸ್ ಸಿಲಿಂಡರ್ ಸ್ಥಿತಿಯನ್ನು ನಿತ್ಯ ಪರಿಶೀಲಿಸಬೇಕು. ಸೋರಿಕೆಯಾಗದಂತೆ ನಿಗಾ ವಹಿಸಬೇಕು. ಬೆಂಕಿ ಅವಘಡ ಸಂಭವಿಸಿದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಗ್ಯಾಸ್ ಹೊತ್ತಿಕೊಂಡಲ್ಲಿ ಗಾಬರಿಯಾಗುವ ಬದಲು ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿ ಆರಿಸುವ ವಿಧಾನವನ್ನು ಅನುಸರಿಸಬೇಕು. ಮೊದಲು ಜೀವ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಅಗ್ನಿಶಾಮಕ ಸಿಬ್ಬಂದಿ ಪೆರಿಯ ನಾಯಗಂ, ಆನಂದ್, ದೀಪಕ್, ಚಂದ್ರೇಗೌಡ, ನಾಗಪ್ಪ, ಲೋಕೇಶ್ ಇತರರಿದ್ದರು.