ಹನೂರು: ಕಾಡಿಗೆ ಬೆಂಕಿ ಬೀಳದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸುವ ಮೂಲಕ ಅರಣ್ಯ ಇಲಾಖೆಗೆ ಸಹಕಾರ ನೀಡಬೇಕು ಎಂದು ಆರ್‌ಎಫ್‌ಒ ಪ್ರಮೋದ್ ಮನವಿ ಮಾಡಿದರು.
ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದೊಳಗಿನ ನೆಲ್ಲಿಕತ್ರಿ ಗಿರಿಜನರ ಹಾಡಿಯಲ್ಲಿ ಗುರುವಾರ ಬೆಂಕಿ ತಡೆ ಸಂಬಂಧ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಣ್ಯ ಮನುಕುಲದ ಸಂಪತ್ತು. ಆದ್ದರಿಂದ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದು ಇಲಾಖೆಯ ಜವಾಬ್ದಾರಿ ಎಷ್ಟು ಮುಖ್ಯವೋ ಗ್ರಾಮಸ್ಥರ ಸಹಕಾರವೂ ಅಷ್ಟೇ ಮುಖ್ಯ. ಆದರೆ ಈ ಭಾಗದಲ್ಲಿ ಕಳೆದ ವಾರ ಕಿಡಿಗೇಡಿಗಳ ಕೃತ್ಯದಿಂದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಕಿಡಿಗೇಡಿಗಳ ಇಂತಹ ಕೃತ್ಯದಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ಇಲಾಖೆಯ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಜಿಲ್ಲಾ ಬಡಕಟ್ಟು ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಮಾತನಾಡಿ, ಪ್ರತಿಯೊಬ್ಬರೂ ಅರಣ್ಯ ಇಲಾಖೆಗೆ ಸಹಕಾರ ನೀಡುವ ಮೂಲಕ ಕಾಡಿಗೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ, ಜಿಲ್ಲಾ ಕಾರ್ಯದರ್ಶಿ ಮಹದೇವಯ್ಯ, ಮುಖಂಡರಾದ ಚಂದ್ರು, ಮಾದೇವ ಇತರರಿದ್ದರು.