ಮಾದಕ ವ್ಯಸನದ ದುಷ್ಪರಿಣಾಮಗಳ ವಿರುದ್ಧ ಜಾಗೃತರಾಗಿ

ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆ ಹಾಗೂ ವ್ಯಸನದ ದುಷ್ಪರಿಣಾಮಗಳ ಕುರಿತ ಜಾಗೃತಿ ಜಾಥಾಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಚಾಲನೆ ನೀಡಿದರು. ಡಿವೈಎಸ್‌ಪಿಗಳಾದ ಸ್ನೇಹರಾಜ್, ಸೋಮಣ್ಣ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ  ಇದ್ದರು.
ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆ ಹಾಗೂ ವ್ಯಸನದ ದುಷ್ಪರಿಣಾಮಗಳ ಕುರಿತ ಜಾಗೃತಿ ಜಾಥಾಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಚಾಲನೆ ನೀಡಿದರು. ಡಿವೈಎಸ್‌ಪಿಗಳಾದ ಸ್ನೇಹರಾಜ್, ಸೋಮಣ್ಣ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಕರೆ
  • ನಗರದಲ್ಲಿ ವಿದ್ಯಾರ್ಥಿಗಳಿಂದ ಜಾಥಾ
ಚಾಮರಾಜನಗರ: ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಮಾದಕ ವಸ್ತುಗಳ ಸೇವನೆ ಹಾಗೂ ಮಾದಕ ವ್ಯಸನದ ದುಷ್ಪರಿಣಾಮಗಳ ವಿರುದ್ಧ ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಾಗೃತರಾಗುವಂತೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ತಿಳಿಸಿದರು.
ನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಾದಕ ವ್ಯಸನ ತಡೆ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆ ಹಾಗೂ ವ್ಯಸನದ ದುಷ್ಪರಿಣಾಮಗಳ ಕುರಿತ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಗೆ ಯುವಜನತೆ ಬಲಿಯಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಮಾದಕ ವಸ್ತುಗಳ ಚಟ ವ್ಯಕ್ತಿಯ ಕುಟುಂಬ ಹಾಗೂ ಸಮಾಜದ ಮೇಲೆ ಪರಿಣಾಮ ಬೀರಲಿದೆ. ಯುವಜನರು, ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳನ್ನು ಅರಿತು ಅವುಗಳಿಂದ ದೂರವಿರಬೇಕು. ಈ ಬಗ್ಗೆ ಯುವಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದರು.
ದೈಹಿಕ ಹಾಗೂ ಮಾನಸಿಕ ಸಮತೋಲನ ಹೊಂದುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಮಾದಕ ವಸ್ತುಗಳ ಸೇವನೆ ನಿಲ್ಲಿಸಬೇಕು. ಸ್ವಾಸ್ಥ್ಯ ಸಮಾಜ ನಿರ್ಮಾಣ ಮೂಲಕ ಬಲಿಷ್ಠ ದೇಶ ಕಟ್ಟಲು ಮುಂದಾಗಬೇಕು. ಮಾದಕ ಪದಾರ್ಥಗಳ ಉತ್ಪಾದನೆ, ಸಾಗಣೆ, ಬಳಕೆ ಮಾಡುವವರಿಗೆ ವಿವಿಧ ಅರಿವು ಕಾರ್ಯಕ್ರಮಗಳ ಮೂಲಕ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ. ಬೀಡಿ, ಸಿಗರೇಟ್, ತಂಬಾಕು, ಗುಟ್ಕಾದಂತಹ ಅಮಲು ಬರಿಸುವ ಮಾದಕ ವಸ್ತುಗಳ ಸೇವನೆ ತಡೆಯಲು ವಿವಿಧ ಇಲಾಖೆಗಳು, ಸಂಘಸಂಸ್ಥೆಗಳು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ತಿಳಿಸಿದರು.
ವ್ಯಸನಕ್ಕೆ ಒಳಗಾಗಿರುವವರನ್ನು ಪತ್ತೆಹಚ್ಚಿ ಮಾದಕ ವಸ್ತುಗಳಿಂದ ದೂರವಿರುವಂತೆ ಪ್ರೇರೇಪಿಸಲು ಪುನಶ್ಚೇತನ ಶಿಬಿರಗಳನ್ನು ಆಯೋಜಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಸೇವನೆ ತಡೆಗೆ ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಾದಕ ವ್ಯಸನದ ಸರಪಳಿಯ ಕೊಂಡಿಯನ್ನು ಕಳಚುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯುವಕರು, ಸಾರ್ವಜನಿಕರು ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಪಡೆದು ತಮ್ಮ ಸುತ್ತಲಿನ ಇತರರಿಗೂ ತಿಳಿಹೇಳುವಂತೆ ಸಲಹೆ ನೀಡಿದರು.
ವಿವಿಧ ಸಂಘಸಂಸ್ಥೆಯ ಪದಾಧಿಕಾರಿಗಳು, ಸೇವಾಭಾರತಿ, ಬ್ರೈಟ್ ಕಾಲೇಜು, ಸರ್ಕಾರಿ ಪ್ರೌಢಶಾಲೆ ಹಾಗೂ ಜೆ.ಎಸ್.ಎಸ್. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಾದಕ ವಸ್ತುಗಳ ಸೇವೆನೆ ವಿರುದ್ಧ ಪ್ಲೇಕಾರ್ಡ್‌ಗಳ ಮೂಲಕ ಜಾಗೃತಿ ಘೋಷಣೆಗಳನ್ನು ಕೂಗುವ ಮೂಲಕ ಜನಜಾಗೃತಿ ಮೂಡಿಸಿದರು. ಡಿವೈಎಸ್‌ಪಿಗಳಾದ ಸ್ನೇಹರಾಜ್, ಸೋಮಣ್ಣ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net