ಹನೂರು: ಜಗಜ್ಯೋತಿ ಬಸವೇಶ್ವರರ ಆದರ್ಶ ಉತ್ತಮ ಸಮಾಜಕ್ಕೆ ದಾರಿದೀಪವಾಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಬಿಜೆಪಿ ಮುಖಂಡ ಡಾ.ಎಸ್ ದತ್ತೇಶ್‌ಕುಮಾರ್ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ ಸಮೀಪ ವೃತ್ತದ ಬಳಿ ವೀರಶೈವ-ಲಿಂಗಾಯತ ಮಹಾಸಭಾದ ತಾಲೂಕು ಘಟಕ ವತಿಯಿಂದ ಸೋಮವಾರ ಆಯೋಜಿಸಿದ್ಧ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಸವೇಶ್ವರರು ಸಮ ಸಮಾಜ ನಿರ್ಮಿಸಲು ಶ್ರಮಿಸಿದವರು. ಕಾಯಕವೇ ಕೈಲಾಸ ತತ್ವದ ಮೂಲಕ ಜನರಲ್ಲಿ ಕಾಯಕದ ಮಹತ್ವವನ್ನು ಸಾರಿದವರು. ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಸಮಾನತೆಗೆ ಭದ್ರ ಬುನಾದಿ ಹಾಕಿದವರು. ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದವರು. ಹಾಗಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಶ್ರಮ ಅಪಾರ ಎಂದು ತಿಳಿಸಿದರು.
ಬಿಜೆಪಿ ಮುಖಂಡ ನಿಶಾಂತ್ ಮಾತನಾಡಿ, ಬಸವೇಶ್ವರರು ಸಾಮಾಜಿಕ ಹರಿಕಾರ. ಅವರ ತತ್ವ ಎಲ್ಲರಿಗೂ ಆದರ್ಶ. ಆದ್ದರಿಂದ ಅವರ ಚಿಂತನೆಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವುದರ ಮೂಲಕ ಸಾಗೋಣ ಎಂದರು.
ಮಹಾಸಭಾದ ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್, ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ನಿರ್ದೇಶಕರಾದ ಬಸವರಾಜಪ್ಪ, ಉಮೇಶ್, ಪ್ರಧಾನ ಕಾರ್ಯದರ್ಶಿ ಕುಮಾರ್, ಮುಖಂಡರಾದ ಮೋಹನ್, ರಮೇಶ್‌ನಾಯ್ಡು, ಸಿದ್ದಪ್ಪ ಇತರರಿದ್ದರು.