ನೂತನ ವರ್ಷಕ್ಕೂ ಮೊದಲೇ ಬಂಡಿಜಾತ್ರೆ

ಚಾಮರಾಜನಗರ ತಾಲೂಕಿನ ಕಸ್ತೂರು ಸಮೀಪದಲ್ಲಿರುವ ಶ್ರೀದೊಡ್ಡಮ್ಮತಾಯಿ ದೇವಸ್ಥಾನಕ್ಕೆ ತಹಸೀಲ್ದಾರ್ ಗಿರಿಜಾ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಮರಾಜನಗರ ತಾಲೂಕಿನ ಕಸ್ತೂರು ಸಮೀಪದಲ್ಲಿರುವ ಶ್ರೀದೊಡ್ಡಮ್ಮತಾಯಿ ದೇವಸ್ಥಾನಕ್ಕೆ ತಹಸೀಲ್ದಾರ್ ಗಿರಿಜಾ ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿ.28 ರಂದು ನಡೆಯುವ ಐತಿಹಾಸಿಕ ಜಾತ್ರೆಗೆ ಸಿದ್ಧತೆ
  • 20 ಕ್ಕಿಂತಲೂ ಹೆಚ್ಚು ಗ್ರಾಮಗಳಲ್ಲಿ ಮನೆಮಾಡಿದ ಸಂಭ್ರಮ
  • ಮನೆಮಾಡಿದ ಸಂಭ್ರಮ
ಚಾಮರಾಜನಗರ : ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ವರ್ಷದ ಮೊದಲ ಜಾತ್ರೆ ಎಂದೇ ಜನಜನಿತವಾಗಿರುವ ಬಂಡಿಜಾತ್ರೆ ನೂತನ ವರ್ಷಕ್ಕೂ ಮೊದಲೇ ಬಂದಿದ್ದು, 20 ಕ್ಕಿಂತಲೂ ಹೆಚ್ಚು ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
ತಾಲೂಕಿನ ಕಸ್ತೂರು ಗ್ರಾಮದಲ್ಲಿರುವ ಶ್ರೀದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ನೂರಾರು ವರ್ಷಗಳಿಂದಲೂ ಜಾತ್ರಾ ಮಹೋತ್ಸವ ನಡೆದುಕೊಂಡು ಬರುತ್ತಿದ್ದು, ಪ್ರತಿವರ್ಷದಂತೆ ಡಿ.28 ರ ಪುಷ್ಯಮಾಸದ ಎರಡನೇ ಭಾನುವಾರ ಬಂಡಿಜಾತ್ರೆ ನಡೆಯಲಿದೆ. ಜಾತ್ರಾಮಹೋತ್ಸವದ ಅಂಗವಾಗಿ ದೇವಾಲಯಕ್ಕೆ ಸುಣ್ಣ-ಬಣ್ಣ ಬಳಿಯಲಾಗುತ್ತಿದ್ದು, ದೇವಾಲಯದ ಆವರಣವನ್ನು ಕಳೆದ ಒಂದು ವಾರಗಳಿಂದಲೂ ಸ್ವಚ್ಛಗೊಳಿಸಲಾಗುತ್ತಿದೆ. ಜಾತ್ರೆಯ ಸಮಯದಲ್ಲಿ ಬಂಡಿಕಟ್ಟುವ 16 ಗ್ರಾಮಗಳು ಸೇರಿದಂತೆ 20 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಸ್ತೂರು ಬಂಡಿಜಾತ್ರೆಯ ಸಂಭ್ರಮ ಮನೆಮಾಡಿದೆ. ಜಿಲ್ಲೆಯ ವಿವಿಧ ಗ್ರಾಮಗಳಿಂದ ಅಲ್ಲದೇ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಹಾಗೂ ಇನ್ನಿತರೆ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಐತಿಹಾಸಿಕ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಜಾತ್ರಾಮಹೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಮನೆಮಾಡಿದ ಸಂಭ್ರಮ:
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 20 ಕ್ಕಿಂತಲೂ ಹೆಚ್ಚು ಗ್ರಾಮಗಳ ಜನರು ಸೇರಿ ಆಚರಿಸುವ ವಿಶಿಷ್ಟ ಜಾತ್ರೆ ಇದಾಗಿದೆ. ಕಸ್ತೂರು, ಭೋಗಾಪುರ, ಆನಹಳ್ಳಿ, ಮೂಕಹಳ್ಳಿ, ಕಿರಗಸೂರು, ತೊರವಳ್ಳಿ, ಪುಟ್ಟೇಗೌಡನಹುಂಡಿ, ಹೊನ್ನೇಗೌಡನಹುಂಡಿ, ಪುಟ್ಟಯ್ಯನಹುಂಡಿ, ಮರಿಯಾಲ, ಕೆಲ್ಲಂಬಳ್ಳಿ, ಸಪ್ಪಯ್ಯನಪುರ, ದಾಸನೂರು, ಚಿಕ್ಕಹೊಮ್ಮ, ದೊಡ್ಡಹೊಮ್ಮ ಹಾಗೂ ಹೆಗ್ಗವಾಡಿ ಗ್ರಾಮಸ್ಥರು ಬಂಡಿಗಳನ್ನು ಕಟ್ಟಿ ವಿಶೇಷ ಅಲಂಕಾರ ಮಾಡಿ ಗ್ರಾಮಗಳಲ್ಲಿ ಮೆರವಣಿಗೆ ಮಾಡಿ, ಕಸ್ತೂರು ದೊಡ್ಡಮ್ಮ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆಯನ್ನು ಹಾಕುವ ಮೂಲಕ ಸಂಭ್ರಮಿಸುತ್ತಾರೆ. ಉಳಿದಂತೆ ಮರಿಯಾಲದಹುಂಡಿ, ಯಲಕ್ಕೂರು, ಬದನಗುಪ್ಪೆ, ನಾಲ್ಕೂ ಮೋಳೆಗಳಲ್ಲಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಕೆಲವು ಗ್ರಾಮಗಳಲ್ಲಿ ಮಾಂಸಹಾರವನ್ನು ಮಾಡುವ ಮೂಲಕ ಸಂಬಂಧಿಕರನ್ನು ಹಬ್ಬಕ್ಕೆ ಆಹ್ವಾನಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.
ಐತಿಹಾಸಿಕ ಹಿನ್ನೆಲೆ:
ಸುಮಾರು 800 ವರ್ಷಗಳ ಹಿಂದೆ ಬನ್ನಿಮಹಂಕಾಳಿ ಎಂಬ ಹೆಸರಿನಿಂದ ಕಸ್ತೂರು ಹೊರವಲಯದಲ್ಲಿ ಉದ್ಭವ ಮೂರ್ತಿಯಾಗಿ ನೆಲೆಸಿದ ದೇವತೆಯನ್ನು ದೊಡ್ಡಮ್ಮ ಎಂದು ಕರೆಯಲಾಗುತ್ತಿತ್ತು. ಈ ದೇವರು ಕಸ್ತೂರು ಗ್ರಾಮದ ಗೌಡಿಕೆ ಮನೆತನದವರ ಕನಸಿನಲ್ಲಿ ಬಂದು ಕೆರೆಯ ಬಳಿಯ ಉದ್ಭವ ಸ್ಥಳದಲ್ಲೇ ನನ್ನನ್ನು ಪೂಜಿಸಬೇಕು ಎಂದು ಕೇಳಿಕೊಂಡಿದ್ದಳು ಎಂಬ ಕಥೆಗಳನ್ನು ಹೇಳಲಾಗುತ್ತದೆ. ಗೌಡಿಕೆ ಮನೆತನದವರು ಆಸ್ಥಳವನ್ನು ಪರಿಶೀಲಿಸಿದಾಗ ವಿಗ್ರಹವಿರುವುದು ಕಂಡುಬಂದು, ಸುತ್ತಲಿನ ಗ್ರಾಮಸ್ಥರು ಸೇರಿ ಅಂದಿನಿಂದ ಪೂಜಿಸಿಕೊಂಡು ಬರುತ್ತಿದ್ದಾರೆ ಎಂದು ಹಿರಿಯರು ಹೇಳುತ್ತಾರೆ. ಅದು ಬಂಡಿಜಾತ್ರೆಯಾಗಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ.
ಬಂಡಿಜಾತ್ರೆಗೆ ಸಕಲ ಸಿದ್ಧತೆ:
ತಾಲೂಕು ಆಡಳಿತದಿಂದ ಈಗಾಗಲೇ ಬಂಡಿಜಾತ್ರೆ ಆಯೋಜನೆಯ ಸಂಬಂಧ ಡಿ.9 ರಂದು ಪೂರ್ವ ಸಿದ್ಧತಾ ಸಭೆ ನಡೆಸಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಾತ್ರೆಯ ಸ್ಥಳವನ್ನು ಈಗಾಗಲೇ ಸ್ವಚ್ಛಗೊಳಿಸಲಾಗುತ್ತಿದ್ದು, ವಿವಿಧ ವ್ಯಾಪಾರಿಗಳಿಗೆ ಸ್ಟಾಲ್‌ಗಳನ್ನು ಹಾಕಿಕೊಳ್ಳಲು ಪತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಂತೇಮರಹಳ್ಳಿ, ಕುದೇರು, ಚಾಮರಾಜನಗರ ಹಾಗೂ ಇನ್ನಿತರೆ ಕಡೆಗಳಿಂದ ಬರುವ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯ, ಜಂಗಲ್ ಕಟಿಂಗ್ ಮಾಡಲಾಗಿದ್ದು, ಜ.ಡಿ.26 ರಿಂದಲೇ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಡುವಂತೆ ಕ್ರಮವಹಿಸಲಾಗಿದೆ. ಅದಲ್ಲದೇ ಕುಡಿಯುವ ನೀರು, ಸ್ವಚ್ಛತೆ ಹಾಗೂ ಇನ್ನಿತರೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಗಿರಿಜಾ ಅವರು ವಿಜಯವಾಣಿ ಜತೆಗೆ ಮಾತನಾಡಿ ಮಾಹಿತಿ ನೀಡಿದರು.
ಪ್ರತಿವರ್ಷ ಪುಷ್ಯಮಾಸದಲ್ಲಿ ಸಲ್ಲುವ 2 ನೇ ಭಾನುವಾರ ಬಂಡಿಜಾತ್ರೆ ಆಚರಣೆ ನಡೆಯುತ್ತದೆ. ಈ ವರ್ಷದಲ್ಲಿ ಅಧಿಕ ಮಾಸ ಬಂದಿರುವುದರಿಂದ ನೂತನ ವರ್ಷಕ್ಕೂ ಮೊದಲೇ ಜಾತ್ರೆ ನಡೆಯುತ್ತಿದೆ. ಬಂಡಿಜಾತ್ರೆಗೆ ಐತಿಹಾಸಿಕ ಹಿನ್ನೆಲೆ ಇರುವುದರಿಂದ 20 ಕ್ಕಿಂತಲೂ ಹೆಚ್ಚು ಗ್ರಾಮಗಳು ಸೇರಿ ಬಂಡಿಹಬ್ಬವನ್ನು ಆಚರಣೆ ಮಾಡುತ್ತೇವೆ. ಮರಿಯಾಲದಿಂದ ಬರುವ ಹೂಹೊಂಬಾಳೆ ಬಂಡಿ ದೊಡ್ಡಮ್ಮತಾಯಿಗೆ ಪ್ರಿಯವಾಗಿದ್ದು, ಸಾವಿರಾರು ಜನರು ಭಾಗಿಯಾಗುತ್ತಾರೆ.
ಸಿದ್ದಪ್ಪ, ಮರಿಯಾಲ, ಚಾಮರಾಜನಗರ
ಈಗಾಗಲೇ ಬಂಡಿಜಾತ್ರೆ ಸಂಬಂಧ ಪೂರ್ವ ಸಿದ್ಧತಾ ಸಭೆಯನ್ನು ನಡೆಸಿದ್ದು, ಡಿ.25 ರಂದು ದೇವಾಲಯಕ್ಕೂ ಭೇಟಿ ನೀಡಿ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಿದ್ದೇನೆ. ರಸ್ತೆ, ಕುಡಿಯುವ ನೀರು, ಸಾರಿಗೆ ಬಸ್ ವ್ಯವಸ್ಥೆಗೆ ಸೂಚನೆ ನೀಡಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
ಗಿರಿಜಾ, ತಹಸೀಲ್ದಾರ್, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net