ದೊಡ್ಡಹಳ್ಳದ ಚೆಕ್ ಡ್ಯಾಂಗೆ ಬಾಗಿನ

  ಮಣಗಳ್ಳಿಯ ದೊಡ್ಡಹಳ್ಳದ ಚೆಕ್ ಡ್ಯಾಂ ಕಾವೇರಿ ನೀರಿನಿಂದ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಭಾನುವಾರ ಬಾಗಿನ ಅರ್ಪಿಸಿದರು. ರಾಜು, ಮಂಜೇಶ್, ಮಲ್ಲಣ್ಣ, ಮಾದೇಗೌಡ ಇತರರಿದ್ದರು.
ಮಣಗಳ್ಳಿಯ ದೊಡ್ಡಹಳ್ಳದ ಚೆಕ್ ಡ್ಯಾಂ ಕಾವೇರಿ ನೀರಿನಿಂದ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಭಾನುವಾರ ಬಾಗಿನ ಅರ್ಪಿಸಿದರು. ರಾಜು, ಮಂಜೇಶ್, ಮಲ್ಲಣ್ಣ, ಮಾದೇಗೌಡ ಇತರರಿದ್ದರು.
Published on
ಹನೂರು : ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವ ಸಲುವಾಗಿ ತಾಲೂಕಿನ 2 ಗ್ರಾಮ ಪಂಚಾಯಿತಿಯನ್ನು ದತ್ತು ಪಡೆದು ಪ್ರಾಯೋಗಿಕ ಅಧ್ಯಯನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಮಣಗಳ್ಳಿ ಗ್ರಾಮದ ದೊಡ್ಡಹಳ್ಳದ ಚೆಕ್ ಡ್ಯಾಂ ಕಾವೇರಿ ನೀರಿನಿಂದ ಭರ್ತಿಯಾದ ಹಿನ್ನೆಲೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದರು.
ಹನೂರು ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈಗಾಗಲೇ ಕಾವೇರಿ ನದಿ ಮೂಲದಿಂದ ರಾಮನಗುಡ್ಡೆ ಕೆರೆಗೆ ನೀರು ಹರಿಯುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಿದೆ. ಹೀಗಿರುವಾಗ ಚಿಂಚಳ್ಳಿ, ಮಣಗಳ್ಳಿ, ಶಾಗ್ಯ ಹಾಗೂ ಈ ಭಾಗದ ರೈತರು ದೊಡ್ಡಹಳ್ಳಕ್ಕೂ ಕಾವೇರಿ ನೀರು ಹರಿಸುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಅಗತ್ಯ ಕ್ರಮವಹಿಸಿದರ ಪರಿಣಾಮ ಬತ್ತಿಹೋಗಿದ್ದ ಈ ಹಳ್ಳದಲ್ಲಿ ಬೇಸಿಗೆಯಲ್ಲೂ ಕಾವೇರಿ ನೀರು ಹರಿಯುತ್ತಿದೆ. ಚೆಕ್ ಡ್ಯಾಂಗಳು ಭರ್ತಿಯಾಗುತ್ತಿವೆ. ಇದರಿಂದ ರೈತರಲ್ಲಿ ಸಂತಸ ಮನೆ ಮಾಡಿದ್ದು, ಕೃಷಿಗೆ ಅನುಕೂಲವಾಗಿದೆ ಎಂದರು.
ಕ್ಷೇತ್ರದಲ್ಲಿನ ರೈತರು ಕೃಷಿಯನ್ನು ಹೆಚ್ಚು ಅವಲಂಬಿಸಿದ್ದಾರೆ. ಆದರೆ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದಿರುವುದು ಹಾಗೂ ಕೃಷಿಯಲ್ಲಿ ನಷ್ಟವನ್ನು ಎದುರಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದುವಂತಾಗಬೇಕು ಎಂದರು.
ರೈತರಿಗೆ ಅನುಕೂಲವಾಗಲಿದೆ :
2 ಗ್ರಾಪಂಗಳನ್ನು ದತ್ತು ಪಡೆದು ರೈತರು ಬೆಳೆದ ಬೆಳೆಗೆ ವಿಮೆ, ಬೆಂಬಲ ಬೆಲೆ ಸಿಗುವಂತೆ ಬಾಂಡ್ ನೀಡಲು ಪ್ರಾಯೋಗಿಕ ಅಧ್ಯಯನ ನಡೆಸಲು ಚಿಂತನೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.
ಕ್ಷೇತ್ರದಲ್ಲಿ ಸಮರ್ಪಕ ನೀರಾವರಿ ಯೋಜನೆಗೆ ಅಗತ್ಯ ಕ್ರಮವಹಿಸಲಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಉದ್ಯೋಗಕ್ಕೆ ಚಿಂತನೆ:
ತಾಲೂಕಿನಲ್ಲಿ ಸಮರ್ಪಕ ನೀರಾವರಿ ಸೌಕರ್ಯ ಇಲ್ಲದ ಪರಿಣಾಮ ಯುವಕರು ಉದ್ಯೋಗವನ್ನು ಅರಸಿ ಬೇರೆಡೆಗೆ ತೆರಳಿದ್ದಾರೆ. ಇವರನ್ನು ಗ್ರಾಮಕ್ಕೆ ಮರಳಿ ಕರೆ ತರುವ ಕೆಲಸ ವಾಗಬೇಕಿದೆ. ಹಾಗಾಗಿ ಯುವ ಜನರಿಗೆ
ಉದ್ಯೋಗ ನೀಡಬೇಕಿರುವುದು ಅಗತ್ಯವಾಗಿದೆ. ಈ ಬಗ್ಗೆ ಚಿಂತನೆ ನಡೆಸಲಾಗಿದ್ದು, ಅಗತ್ಯ ಕ್ರಮ ವಹಿಸಲಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಬೇಕಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ಹೇಳಿದರು.
ಅಬಕಾರಿ ಉಪ ಆಯುಕ್ತ ಮಾದೇಶ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಹಾಲಿ ನಿರ್ದೇಶಕ ಉದ್ದನೂರು ಪ್ರಸಾದ್, ಮುಖಂಡರಾದ ಮಜೇಶ್, ಶಿವಣ್ಣ, ಮಲ್ಲಣ್ಣ, ತಿರುಪತಿ, ಸಿದ್ದರಾಜು, ಸಿದ್ದೇಗೌಡ, ಜಸ್ಸೀಪಾಷ, ಮಾದೇಗೌಡ, ರಾಮು, ರಾಜು, ರಾಚಪ್ಪ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net