ಬಿ.ರಾಚಯ್ಯ, ಗೌರಮ್ಮ ದಂಪತಿ ಮಾಸದ ನೆನಪು

ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿ.ರಾಚಯ್ಯ ಮತ್ತು ಗೌರಮ್ಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಕುಟುಂಬವರ್ಗದವರು ಪೂಜೆ ಸಲ್ಲಿಸಿದರು.
ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿ.ರಾಚಯ್ಯ ಮತ್ತು ಗೌರಮ್ಮ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಕುಟುಂಬವರ್ಗದವರು ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • B. Rachaiah
ಚಾಮರಾಜನಗರ: ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ 26ನೇ ವರ್ಷ ಹಾಗೂ ಗೌರಮ್ಮ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮಹನೀಯರ ನೆನಪುಗಳನ್ನು ಮಾಸದಂತೆ ಮಾಡಿತು.
ತಾಲೂಕಿನ ಆಲೂರು ಗ್ರಾಮದ ಬಿ.ರಾಚಯ್ಯ ಸ್ಮಾರಕ ಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಬಿ.ರಾಚಯ್ಯ ಅವರು ನಾಡಿಗೆ ಸಲ್ಲಿಸಿದ ಸೇವೆ ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಪತ್ನಿ ಗೌರಮ್ಮ ಅವರ ಮಮಕಾರವನ್ನು ಕುಟುಂಬದವರು, ಗ್ರಾಮಸ್ಥರು, ಸಾರ್ವಜನಿಕರು ನೆನಪು ಮಾಡಿಕೊಳ್ಳುವಂತೆ ಮಾಡಿತು.
ಬಿ.ರಾಚಯ್ಯ ಅವರ ಜೀವನ ಚರಿತ್ರೆಯ ಛಾಯಾಚಿತ್ರಗಳನ್ನು ತುಂಬಿಕೊಂಡಿರುವ ಸ್ಮಾರಕ ಭವನ, ವಿವಿಧ ಬಗೆಯ ಹೂವುಗಳಿಂದ ಸಿಂಗಾರಗೊಂಡು ಸ್ಮರಣೆಯ ಭಾಗವಾದವು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಮಂಜುಳಾ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್.ಬಾಲರಾಜ್ ಮತ್ತು ಶ್ರೀವರ್ಧನ್ ಅವರು ಮೊದಲಿಗೆ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಕುಟುಂಬಸ್ಥರು, ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ನಮನ ಸಲ್ಲಿಸುವ ಮೂಲಕ ಬಿ.ರಾಚಯ್ಯ ಮತ್ತು ಗೌರಮ್ಮ ಅವರ ಸ್ಮರಣೆ ಮಾಡಿದರು.
ಕುಟುಂಬಸ್ಥರಾದ ತ್ರಿವೇಣಿ ಬಿ.ಬಿ.ಲಿಂಗಯ್ಯ, ಎ.ಆರ್.ಪ್ರಭಾ, ಉಮಾ ಪುಟ್ಟಮಾದಯ್ಯ, ರೋಷಿಣಿ, ಪ್ರದೀಪ್‌ಕುಮಾರ್, ಆಲೂರು ಮಲ್ಲಣ್ಣ ಇತರರು ಹಾಜರಿದ್ದರು. ಗಾಯಕರಾದ ಬಸವರಾಜು, ನಟರಾಜು ಹಾಗೂ ಸಂಗಡಿಗರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಸ್ಮರಣೆಯ ಮೆರುಗನ್ನು ಹೆಚ್ಚಿಸಿತು. ಆಗಮಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ಗಣ್ಯರಿಂದ ಗೌರವ ನಮನ: ಬಿ.ರಾಚಯ್ಯ ಸ್ಮಾರಕ ಭವನಕ್ಕೆ ವಿಧಾನಪರಿಷತ್ ಸದಸ್ಯರಾದ ಕೆ.ಶಿವಕುಮಾರ್ ಅವರು ಭೇಟಿ ನೀಡಿ, ಛಾಯಾಚಿತ್ರ ಹಾಗೂ ಬಿ.ರಾಚಯ್ಯ ಅವರು ಬಳಸುತ್ತಿದ್ದ ವಸ್ತುಗಳನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಒಡಗೂಡಿ ವೀಕ್ಷಿಸಿದರು. ಅವರಲ್ಲದೇ ಮಾಜಿ ಸಚಿವ ಬಿ.ಬಿ.ಲಿಂಗಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಬೋಳಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ದಲಿತ ಮುಖಂಡ ವೆಂಕಟರಮಣಸ್ವಾಮಿ(ಪಾಪು), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂಡ ಅಯ್ಯನಪುರ ಶಿವಕುಮಾರ್, ಶಿವಮಲ್ಲು, ಜೆ.ಯೋಗೇಶ್, ಕೆರೆಹಳ್ಳಿ ನವೀನ್, ಕಂದಹಳ್ಳಿ ನಂಜುಂಡಸ್ವಾಮಿ, ಆಲೂರು ಪ್ರದೀಪ್, ಆರ್.ಮಹದೇವ್, ಪುಟ್ಟಸ್ವಾಮಿ ಹಾಗೂ ಇತರರು ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net