ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುಲಭ ಮತ್ತು ಪರಿಣಾಮಕಾರಿ ಕಲಿಕೆಗೆ ಕೃತಕ ಬುದ್ಧಿಮತ್ತೆ ಸಹಕಾರಿಯಾಗಿದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಡೀನ್ ಡಾ.ಕೆ.ಬಸವಣ್ಣ ತಿಳಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು ಗಣಕ ವಿಜ್ಞಾನ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಕೃತಕ ಬುದ್ದಿಮತ್ತೆಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸದ ಆಯಾ ಕಾಲಘಟ್ಟದಲ್ಲಿ ಮನುಷ್ಯನ ಬದುಕಿಗೆ ಯಾವ ಸಾಧನಗಳು ಅಥವಾ ಯಂತ್ರಗಳು ಸಹಕಾರಿಯಾಯಿತೋ, ಅದರಂತೆ ಇತಿಹಾಸದ ಕಾಲಘಟ್ಟವನ್ನು ಗುರುತಿಸುತ್ತಾ ಬಂದಿದ್ದೇವೆ. ಪ್ರಸ್ತುತ ಕಂಪ್ಯೂಟರ್ ಯುಗ ಮುಗಿಯುತ್ತಾ ಬಂದಿದ್ದು, ಪ್ರಪಂಚದಾದ್ಯಂತ ಎಐ ಯುಗ ಪ್ರಾರಂಭವಾಗಿದೆ. ಮನುಷ್ಯನಾದವನು ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ನಮ್ಮ ದೇಶದ ಶಿಕ್ಷಣ ವ್ಯವಸ್ಥೆ, ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲೂ ಎಐ ಲಗ್ಗೆ ಇಟ್ಟಿದೆ ಎಂದರು. ಕೃತಕ ಬುದ್ಧಿಮತ್ತೆಯಿಂದ ಹೆಚ್ಚಿನ ಸಂಶೋಧನೆಗೂ ಸಹಕಾರಿಯಾಗುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಕಲಿಕೆ ಸುಲಭಗೊಳಿಸುವುದು ಮತ್ತು ಪರಿಣಾಮಕಾರಿಯಾಗಿಸುವುದರಲ್ಲಿ ಎಐ ಅತ್ಯಂತ ಅಗತ್ಯವಾಗಿದೆ. ಅದಾಗ್ಯೂ ಯಾವುದೇ ಯಂತ್ರ, ಸಲಕರಣೆಗಳು ಮನುಷ್ಯನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. ಎಐ ಬಳಕೆಯಿಂದ ಆಲೋಚನಾ ಶಕ್ತಿ ಕಡಿಮೆಯಾಗಬಾರದು ಎಂದು ಸಲಹೆ ನೀಡದರು.
ಚಾಮರಾಜನಗರ ವಿಶ್ವ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಜೆ.ದಿವ್ಯಶ್ರೀ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ತಂತ್ರಜ್ಞಾನ ಜಗತ್ತಿಗೆ ನಾವೆಲ್ಲರೂ ಹೊಂದಾಣಿಕೆಯಾಗಬೇಕಿದೆ. ಪ್ರತಿಯೊಂದು ಕ್ಷೇತ್ರಗಳು ಇಂದು ಎಐ ಮಯವಾಗುತ್ತಿದೆ. ಆಗಾಗಿ ಎಐಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಈ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ಮಹಿಳಾ ಕಾಲೇಜು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ರಾಜೇಶ್ ಮಾತನಾಡಿ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಗೆ ಅವಿನಾಭಾವ ಸಂಬಂಧವಿದೆ. ಹತ್ತು ಜನರು ಮಾಡುವ ಕೆಲಸವನ್ನು ಒಂದು ಯಂತ್ರ ಮಾಡುತ್ತದೆ. ಅದಕ್ಕೆ ಅಗತ್ಯವಾದ ತರಬೇತಿಯನ್ನು ನೀಡಬೇಕಿದೆ. ಪ್ರಸ್ತುತ ಸಂದರ್ಭದಲ್ಲಿ ಕೃತಕ ಬುದ್ಧಿ ಮತ್ತೆ ಅತ್ಯಂತ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು ಐಕ್ಯೂಎಸಿ ಸಂಯೋಜಕ ಮಲ್ಲಿಕಾರ್ಜುನಸ್ವಾಮಿ, ವಿದ್ಯಾರ್ಥಿಗಳಾದ ಎಸ್.ಮಾನಸ, ಪ್ರಿಯದರ್ಶಿನಿ, ಮಾದಿಹ ಅಂಬರ್, ಸಾನಿಕ ಹಾಗೂ ಇತರರು ಹಾಜರಿದ್ದರು.