ಜ.26ರಂದು ಆಕ್ಸಿಜನ್ ಸಂತ್ರಸ್ತರಿಗೆ ನೇಮಕಾತಿ ಪತ್ರ

ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಸೋಂಕಿತರ ಕುಟುಂಬಸ್ಥರು ರೋಧಿಸಿದ್ದರು.
ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಸೋಂಕಿತರ ಕುಟುಂಬಸ್ಥರು ರೋಧಿಸಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿಕೆ
  • ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಕುಟುಂಬಸ್ಥರು
ಚಾಮರಾಜನಗರ: ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಗಣರಾಜ್ಯೋತ್ಸವದ ದಿನ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೋವಿಡ್ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಸೋಂಕಿತರಿಗೆ ಆಕ್ಸಿಜನ್ ಸಿಗದೆ 30ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟಿದ್ದರು. ಭಾರತ್ ಜೋಡೋ ಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಈ ಆಶ್ವಾಸನೆ ಇದೀಗ ಈಡೇರುತ್ತಿದ್ದು, ಜ.26ರಂದು ಸಂತ್ರಸ್ತರಿಗೆ ಉದ್ಯೋಗ ನೇಮಕಾತಿ ಪತ್ರ ಕೊಡಲು ತೀರ್ಮಾನಿಸಲಾಗಿದೆ.
ನೇಮಕಾತಿ ಪತ್ರ ಕೊಡ್ತೀವಿ: ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲು ಜ.26ರಂದು ನೇಮಕಾತಿ ಪತ್ರ ಕೊಡುತ್ತೇವೆ ಎಂದು ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಲು ನೇಮಕಾತಿ ಪತ್ರ ನೀಡಲಾಗುವುದು ಎಂದರು.
ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮ: ಆಕ್ಸಿಜನ್ ದುರಂತದ ಸಂಭವಿಸಲು ಕಾರಣರದ ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮವಾಗುವ ಭರವಸೆಯೂ ಸಿಕ್ಕಿದೆ. ಪ್ರಕರಣದ ತನಿಖೆಯನ್ನು ನ್ಯಾ.ಕುನ್ಹಾ ನೇತೃತ್ವದ ಆಯೋಗದಿಂದ ತನಿಖೆ ಮಾಡಿಸಲಾಗಿದೆ. ಈ ತನಿಖೆಯ ವರದಿಯನ್ನು ನ್ಯಾ.ಕುನ್ಹಾ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದು, ವರದಿ ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕಾಗಿದೆ. ಈ ಬಗ್ಗೆ ಸಚಿವ ಕೆ.ವೆಂಕಟೇಶ್ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಸಲ್ಲಿಕೆಯಾಗಿರುವ ತನಿಖಾ ವರದಿಯಲ್ಲಿರುವಂತೆ ತಪ್ಪಿಸ್ಥರ ಮೇಲೆ ಕಾನೂನು ಕ್ರಮಕ್ಕೆ ಸರ್ಕಾರ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದರು.
30 ಜನರಿಗೆ ಉದ್ಯೋಗ:
ಚಾಮರಾಜನಗರ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನ ಆಸ್ಪತ್ರೆಯಲ್ಲಿ 30 ಜನ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತಿದೆ ಎಂದು ಡೀನ್ ಡಾ.ಮಂಜುನಾಥ್ ವಿಜಯವಾಣಿಗೆ ತಿಳಿಸಿದ್ದಾರೆ.
ಹೋರಾಟಗಾರರಲ್ಲಿ ಸಂತಸ:
ಜ.26ರಂದು ನೇಮಕಾತಿ ಪತ್ರ ನೀಡುವುದಾಗಿ ಸಚಿವ ಕೆ.ವೆಂಕಟೇಶ್ ತಿಳಿಸಿರುವುದನ್ನು ಸಂತ್ರಸ್ತರ ಪರವಾಗಿ ಹೋರಾಟ ಮಾಡಿದ ಮುಖಂಡರು ಸ್ವಾಗತಿಸಿದ್ದಾರೆ. ಈ ಕುರಿತು ಎಸ್‌ಡಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಗಾಳೀಪುರ ಮಹೇಶ್ ಮಾತನಾಡಿ, ಕಳೆದ 4 ವರ್ಷಗಳಿಂದ ನಮ್ಮ ಪಕ್ಷ ನಡೆಸಿದ ನಿರಂತರ ಹೋರಾಟದ ಪ್ರತಿಲವಾಗಿ ಸಂತ್ರಸ್ತರಿಗೆ ತಡವಾಗಿಯಾದರೂ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರ ದೊರೆಯುತ್ತಿರುವುದು ಖುಷಿಯ ವಿಚಾರ ಎಂದಿದ್ದಾರೆ. ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಸರ್ಕಾರದ ನಿರ್ಧಾರವನ್ನು ಅಭಿನಂದಿಸುತ್ತೇನೆ. ಜತೆಗೆ ನ್ಯಾ.ಕುನ್ಹಾ ಆಯೋಗದ ವರದಿಯಂತೆ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಎ್ಐಆರ್ ದಾಖಲಾಗಬೇಕೆಂದು ಒತ್ತಾಯಿಸಿದ್ದಾರೆ.
ಸಚಿವ ಕೆ.ವೆಂಕಟೇಶ್ ಅವರು ಹೇಳಿರುವಂತೆ ಗಣರಾಜ್ಯೋತ್ಸವದ ದಿನ ನಮಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ನೀಡಿದರೆ ತುಂಬಾ ಸಂತೋಷವಾಗುತ್ತದೆ.
ನಲ್ಲೂರು ಮಂಜುನಾಥ್, ಆಕ್ಸಿಜನ್ ದುರಂತದ ಸಂತ್ರಸ್ತ
ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಸಲುವಾಗಿ ನಾನೊಬ್ಬ ಶಾಸಕನಾಗಿ ಸದನದಲ್ಲಿ ಮಾತನಾಡಿದ್ದೆ. ಇದರ ಮೇಲೆ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತೀರ್ಮಾನ ತೆಗೆದುಕೊಂಡರು. ಜಿಲ್ಲಾಮಂತ್ರಿಗಳು ಹೇಳಿರುವಂತೆ ಆದಷ್ಟು ಬೇಗ ಸಂತ್ರಸ್ತರಿಗೆ ನೇಮಕಾತಿ ಪತ್ರ ಸಿಕ್ಕರೆ ಸಂತ್ರಸ್ತರಷ್ಟೇ ಸಂತೋಷ ಪಡುತ್ತೇನೆ.
ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net