ಹನೂರು: ಅಜ್ಜೀಪುರ ಗ್ರಾಮದಲ್ಲಿ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಶೌಚಗೃಹ ನಿರ್ಮಿಸುವಂತೆ ರೈತ ಸಂಘದ ಪದಾಧಿಕಾರಿಗಳು ಶನಿವಾರ ಪಿಡಿಒ ಸುರೇಶ್ ಅವರಲ್ಲಿ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಗ್ರಾಮವು ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಜತೆಗೆ ಕೆಲಸ ಕಾರ್ಯಗಳ ನಿಮಿತ್ತ ಈ ಗ್ರಾಮಕ್ಕೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನರು ಆಗಮಿಸುತ್ತಾರೆ. ಆದರೆ ಇಲ್ಲಿ ಬಸ್ ನಿಲ್ದಾಣವಿಲ್ಲ. ಇದರಿಂದ ಸಾರ್ವಜನಿಕರು ರಸ್ತೆ ಬದಿ ಕಾದು ನಿಲ್ಲುವಂತಾಗಿದೆ. ಮಳೆ ಬಂದ ವೇಳೆ ಅಂಗಡಿ ಮುಂಗಟ್ಟುಗಳನ್ನು ಆಶ್ರಯಿಸುವಂತಹ ಪರಿಸ್ಥಿತಿಯಿದೆ. ಶೌಚಗೃಹ ಇಲ್ಲದ ಪರಿಣಾಮ ಸಾರ್ವಜನಿಕರು ಅದರಲ್ಲೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮ ವಹಿಸಿ ಬಸ್ ನಿಲ್ದಾಣ ಹಾಗೂ ಶೌಚಗೃಹವನ್ನು ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸುವುದಾಗಿ ಪಿಡಿಒ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಾಜಣ್ಣ, ರೈತ ಮುಖಂಡರಾದ ಮಾದೇವ, ನಾಗರಾಜು, ರಾಜಣ್ಣ ಹಾಗೂ ಈರಣ್ಣ ಇತರರು ಇದ್ದರು.