ಖಾಕಿ ನೆರಳಲ್ಲಿ ಜನ ವಿರೋಧಿ ಕಾಮಗಾರಿ ಶುರು

ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಮುಖರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಮುಖರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು
Published on

ಪ್ರಮುಖ ಮುಖ್ಯಾಂಶಗಳು

  • ಬದನಗುಪ್ಪೆ-ಪಣ್ಯದಹುಂಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಆರಂಭ
  • ಪೊಲೀಸರ ಸರ್ಪಗಾವಲಿನಲ್ಲಿ ಜೆಸಿಬಿ ಸದ್ದು, ಧರಣಿ ನಡೆಸಿದ ಗ್ರಾಮಸ್ಥರು
ಚಾಮರಾಜನಗರ: ಸೇತುವೆ ನಿರ್ಮಾಣ ಮಾಡುತ್ತಿರುವುದು ಜನರಿಗೋಸ್ಕರ. ಪೊಲೀಸರು ಇರುವುದು ಜನರಿಗೆ ರಕ್ಷಣೆ ನೀಡುವುದಕ್ಕೋಸ್ಕರ. ಆದರೆ ಇಲ್ಲಿ ಕಟ್ಟುತ್ತಿರುವ ಮೇಲ್ಸೆತುವೆಗೆ ಜನ ವಿರೋಧ ಸ್ಫೋಟಗೊಂಡಿತು. ಗ್ರಾಮಸ್ಥರನ್ನು ಬಂಧಿಸಿಯಾದರೂ ಮೇಲ್ಸೇತುವೆ ನಿರ್ಮಾಣ ಮಾಡಲು ಪೊಲೀಸರು ನಿಂತರು. ಈ ಹೋರಾಟದ ನಡುವೆ ಖಾಕಿ ಸರ್ಪಗಾವಲಿನಲ್ಲಿ ಕಾಮಗಾರಿ ಶುರುವಾಯಿತು.
ತಾಲೂಕಿನ ಬದನಗುಪ್ಪೆ-ಪಣ್ಯದಹುಂಡಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿರೋಧಿಸಿ ಸೋಮವಾರ ಬೆಳಗ್ಗೆ ಅಕ್ಕ-ಪಕ್ಕದ ಗ್ರಾಮಸ್ಥರು ಪಣ್ಯದಹುಂಡಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯ ಡಿಪಿಆರ್‌ನಲ್ಲಿ ಅಂಡರ್‌ಪಾಸ್ ಇಲ್ಲದೆ, ಬಸ್ ನಿಲ್ದಾಣವಿಲ್ಲದೆ ಜನರಿಗೆ ತೊಂದರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಂಡರ್‌ಪಾಸ್, ಬಸ್ ನಿಲ್ದಾಣ ನಿರ್ಮಾಣ ಮಾಡಿ ಕಾಮಗಾರಿ ಆರಂಭಿಸಿ ಎಂದು ಗ್ರಾಮಸ್ಥರು ಈ ಹಿಂದಿನಿಂದಲೂ ಪಟ್ಟು ಹಿಡಿದಿರುವುದನ್ನು ಮತ್ತೆ ಪುನರುಚ್ಚರಿಸಿದರು. ಕಾಮಗಾರಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರೇಣುಕಾ ರೈಲ್ವೆ ಇಲಾಖೆಯಿಂದ ಅಂಡರ್‌ಪಾಸ್ ಮಾಡಿಕೊಡುತ್ತಾರೆ ಎಂದು ಹೇಳಿ ಮನವೊಲಿಸಲು ಮುಂದಾದಾಗ ಗ್ರಾಮಸ್ಥರು ಒಪ್ಪಲಿಲ್ಲ. ನಾವು ಎರಡು ವರ್ಷಗಳಿಂದ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಮನವಿ ಸಲ್ಲಿಸುತ್ತಲೇ ಇದ್ದೇವೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರೈಲ್ವೆ ಇಲಾಖೆಗೆ ಬರೆದಿರುವ ಪತ್ರವನ್ನು ತೋರಿಸಿ ಎಂದು ಪ್ರಶ್ನೆ ಮಾಡಿದರು. ಈಗ ಪತ್ರ ವ್ಯವಹಾರ ಮಾಡಿ ನಂತರವೇ ಕಾಮಗಾರಿಯನ್ನು ಆರಂಭಿಸಲು ತಾಕೀತು ಮಾಡಿದರು. ಇಷ್ಟರ ಮೇಲೂ ನೀವು ಕಾಮಗಾರಿ ಶುರು ಮಾಡಿದರೆ ನಮ್ಮ ಹೋರಾಟದ ಸ್ವರೂಪವೂ ಬದಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಮಾತಿಗೆ ಉತ್ತರ ಕೊಡಲು ತಡಕಾಡಿದ ಎನ್‌ಎಚ್ ಅಧಿಕಾರಿ ರೇಣುಕಾ ತಮ್ಮ ಮೇಲಧಿಕಾರಿ ಬೆಂಗಳೂರಿನಿಂದ ಬರುತ್ತಿದ್ದಾರೆ. ಅವರು ಗ್ರಾಮಸ್ಥರೊಂದಿಗೆ ಮಾತನಾಡಲಿದ್ದಾರೆ ಎಂದು ಹೇಳಿ ಪಕ್ಕಕ್ಕೆ ಸರಿದರು. ಬರಲಿರುವ ಅಧಿಕಾರಿಗಾಗಿಯೇ ಎಲ್ಲರೂ ಸ್ವಲ್ಪ ಹೊತ್ತು ಕಾಯಬೇಕಾಯಿತು. ಈ ವೇಳೆ ಎನ್‌ಎಚ್‌ನ ಇಇ ಅನಿಲ್ ಆಗಮಿಸಿ ಗ್ರಾಮಸ್ಥರೊಂದಿಗೆ ಮಾತನಾಡಿ, ತಕ್ಷಣಕ್ಕೆ ರೈಲ್ವೆ ಗೇಟ್ ಬಂದ್ ಆಗುವುದಿಲ್ಲ. ಇದನ್ನು ಮುಚ್ಚಬೇಕಾದರೆ ನಾವು ಮತ್ತು ಜಿಲ್ಲಾಧಿಕಾರಿ ಎನ್‌ಒಸಿ ಕೊಡಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಪ್ರಸ್ತುತ ಮಾಡಿರುವ ಡಿಪಿಆರ್ ಸರಿ ಇಲ್ಲ. ಕೆಲಸ ಶುರು ಮಾಡಿದ ಮೇಲೆ ಅಂಡರ್‌ಪಾಸ್, ಬಸ್ ನಿಲ್ದಾಣ ಮಾಡಿಕೊಸುವ ಭರವಸೆ ಇಲ್ಲ. ಕಾಮಗಾರಿ ನಿಲ್ಲಿಸಿ ಡಿಪಿಆರ್ ಬದಲಾಯಿಸಿ ಕೆಲಸ ಶುರು ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಎನ್‌ಎಚ್ ಇಇ ಅನಿಲ್ ಪ್ರತಿಕ್ರಿಯಿಸಿ, ಅಂಡರ್‌ಪಾಸ್ ನಿರ್ಮಾಣ ಮಾಡಲು ರೈಲ್ವೆ ಇಲಾಖೆ ಅಧಿಕಾರಿಗಳು ಬಂದು ನೋಡಿಕೊಂಡು ಹೋಗಿದ್ದಾರೆ. ನಾವು ಅವರಿಗೆ ಸರ್ವೆ ಮಾಹಿತಿಯನ್ನು ನೀಡಿದ್ದೇವೆ ಎಂದರು. ಇದಕ್ಕೆ ರೈತ ಮುಖಂಡ ಹೊನ್ನೂರು ಬಸವಣ್ಣ ಸರ್ವೆ ಮಾಹಿತಿಯನ್ನು ಕೊಡಿ ಎಂದು ಪ್ರಶ್ನಿಸಿದಾಗ ಅಧಿಕಾರಿಯನ್ನು ಪೇಚಿಗೆ ಸಿಲುಕಿಸಿದರು. ರೈತ ಮುಖಂಡ ವಿಜಯ್‌ಕುಮಾರ್ ಮಾತನಾಡಿ, ಪೊಲೀಸರನ್ನು ನಿಯೋಜಿಸಿಕೊಂಡು ಕಾಮಗಾರಿ ಶುರು ಮಾಡುತ್ತೀರಾ. ಮುಂದಿನ ದಿನಗಳಲ್ಲಿ ಇಲ್ಲಿಂದ ವರ್ಗಾವಣೆಗೊಳ್ಳುವ ಅಧಿಕಾರಿ, ಪೊಲೀಸರು ಸ್ಥಳೀಯ ಸಮಸ್ಯೆಯನ್ನು ಅನುಭವಿಸುತ್ತಾರಾ ಎಂದು ಸಿಟ್ಟಿಗೆದ್ದರು. ಈ ವೇಳೆ ಗ್ರಾಮಸ್ಥರು 5 ಸಾವಿರ ಗ್ರಾಮಸ್ಥರನ್ನು ಬಂಧಿಸುತ್ತೀರಾ ಎಂದು ಪ್ರಶ್ನಿಸಿದರು. ಈ ಮಾತುಕತೆ ನಡೆದ ಕೆಲವ ಹೊತ್ತಿನಲ್ಲೇ ಪಣ್ಯದಹುಂಡಿ ಗ್ರಾಮದ ಬಳಿ ಪೊಲೀಸರ ಸರ್ಪಗಾವಲಿನಲ್ಲಿ ಜೆಸಿಬಿಯಿಂದ ಭೂಮಿ ಅಗೆದು ಕಾಮಗಾರಿ ಶುರು ಮಾಡಲಾಯಿತು.
ಪಾದಯಾತ್ರೆಗೆ ನಿರ್ಧಾರ:
ವಿರೋಧ ವ್ಯಕ್ತಪಡಿಸಿದರೂ ಬಿಡದೆ ಪೊಲೀಸರನ್ನು ನಿಯೋಜಿಸಿಕೊಂಡು ಕಾಮಗಾರಿ ಆರಂಭಿಸಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಪಣ್ಯದಹುಂಡಿ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆ ನಡೆಸಿದರು. ಪ್ರತಿಭಟನಾನಿರತರನ್ನು ಉದ್ದೇಶಿಸಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಮಾತನಾಡಿ, ಕಾಮಗಾರಿ ಆರಂಭಿಸಲು ರಕ್ಷಣೆ ನೀಡಬೇಕೆಂದು ಅಧಿಕಾರಿಗಳು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಮ್ಮ ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದರು. ಪ್ರತಿಭಟನಾಕಾರರನ್ನು ಬಂಧಿಸಲು ಸಿದ್ಧರಾಗಿರುವಂತೆ ಪೊಲೀಸರು ಸುತ್ತುವರೆದಿದ್ದರು. ಈ ವೇಳೆ ರೈತ ನಾಯಕ ಹೊನ್ನೂರು ಬಸವಣ್ಣ ಮಾತನಾಡಿ, ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸಿ ಎಂದರೆ, ಪೊಲೀಸರನ್ನು ಬಳಸಿಕೊಂಡು ಬ್ರಿಟೀಷರ ರೀತಿ ನಮ್ಮ ಮೇಲೆ ಗಧಾಪ್ರಹಾರ ಮಾಡಲು ಬಂದಿದ್ದಾರೆ. ನಮ್ಮ ಚಳವಳಿ ಇಲ್ಲಿಗೆ ನಿಲ್ಲುವುದಿಲ್ಲ. ಕಾಮಗಾರಿ ನಿಲ್ಲುವವರೆಗೂ ಬಿಡುವುದಿಲ್ಲ. ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರನ್ನೂ ಒಗ್ಗೂಡಿಸಿ ಜೂ.7ರಂದು ಜಿಲ್ಲಾಡಳಿತ ಭವನಕ್ಕೆ ಪಾದಯಾತ್ರೆಯಲ್ಲಿ ತೆರಳೋಣ ಎಂದರು. ಇದಕ್ಕೆ ಗ್ರಾಮಸ್ಥರೆಲ್ಲರೂ ಒಪ್ಪಿದರು. ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಮುಂದುವರೆಸಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಕರೆ:
ಪ್ರತಿಭಟನೆ ನಡೆಸುತ್ತಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಅವರೊಂದಿಗೆ ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ೆನ್ ಕರೆಯಲ್ಲಿ ಮಾತನಾಡಿದರು. ರೈಲ್ವೆ ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡಬೇಕೆಂದು ಪಟ್ಟು ಹಿಡಿದಿದ್ದ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಸಚಿವ ವಿ.ಸೋಮಣ್ಣಗೆ ಕರೆ ಮಾಡಿ ಹೊನ್ನೂರು ಬಸವಣ್ಣ ಅವರಿಗೆ ೆನ್ ಕೊಟ್ಟರು. ಗ್ರಾಮಸ್ಥರ ಮನವಿಯಂತೆ ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ಕೊಟ್ಟರು. ಇದಕ್ಕೆ ಹೊನ್ನೂರು ಬಸವಣ್ಣ ಪ್ರತಿಕ್ರಿಯಿಸಿ, ನಾವು ನಿಮ್ಮನ್ನು ನೇರವಾಗಿಯೇ ಭೇಟಿ ಮಾಡುತ್ತೇವೆ. ಸದ್ಯಕ್ಕೆ ಕಾಮಗಾರಿ ನಿಲ್ಲಿಸಲಿ ಎಂದು ಹೇಳಿ ಪ್ರತಿಭಟನೆ ಮುಂದುವರೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net