ಮಕ್ಕಳು ಹಾಗೂ ವಯಸ್ಕರಲ್ಲಿ ರಕ್ತಹೀನತೆ

 ಚಾಮರಾಜನಗರದ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲೆ ವಿಭಾಗ) ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ವಿದ್ಯಾರ್ಥಿನಿಗೆ ಅಲ್ಬೆಂಡಝೋಲ್-400 ಎಂ.ಜಿ ಮಾತ್ರೆ ನುಂಗಿಸಿದರು. ಡಿಸಿ ಶ್ರೀರೂಪಾ, ಜಿಪಂ ಸಿಇಒ ಮೋನಾರೋತ್, ಡಾ.ರಾಜೇಶ್, ಡಾ.ರೇಣುಕಾ ಇತರರು ಹಾಜರಿದ್ದರು.
ಚಾಮರಾಜನಗರದ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲೆ ವಿಭಾಗ) ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ವಿದ್ಯಾರ್ಥಿನಿಗೆ ಅಲ್ಬೆಂಡಝೋಲ್-400 ಎಂ.ಜಿ ಮಾತ್ರೆ ನುಂಗಿಸಿದರು. ಡಿಸಿ ಶ್ರೀರೂಪಾ, ಜಿಪಂ ಸಿಇಒ ಮೋನಾರೋತ್, ಡಾ.ರಾಜೇಶ್, ಡಾ.ರೇಣುಕಾ ಇತರರು ಹಾಜರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ
  • ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿರುವುದು ಎಲ್ಲರಿಗೂ ಅಗತ್ಯ
ಚಾಮರಾಜನಗರ:

ಮಕ್ಕಳು ಹಾಗೂ ವಯಸ್ಕರಲ್ಲಿ ರಕ್ತಹೀನತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಜಂತುಹುಳು ನಿವಾರಣಾ ಮಾತ್ರೆ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ತಹೀನತೆ, ಪೋಲಿಯೊ ರೋಗಗಳು ಇಂದು ನಿನ್ನೆಯದಲ್ಲ. ಆಗಿನ ಹಳೇ ಕಾಲದಲ್ಲಿ ಈ ಕಾಯಿಲೆಗಳಿಗೆ ಔಷಧಿಯೇ ಇರಲಿಲ್ಲ. ಹೊಸ ಹೊಸ ಸಂಶೋಧನೆಗಳಿಂದ ಈ ರೋಗಗಳಿಗೆ ಔಷಧಿ ಕಂಡುಹಿಡಿಯಲಾಗಿದೆ. ಜಂತುಹುಳು ದೇಹದಲ್ಲಿ ಸೇರಿ ರಕ್ತಹೀನತೆಯಿಂದ ಬಳಲುವುದಲ್ಲದೆ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗಲಿದೆ. ಮಕ್ಕಳಲ್ಲಿ ರಕ್ತಹೀನತೆ ತಡೆಯಲು ಜಂತುಹುಳು ನಿವಾರಣಾ ಮಾತ್ರೆ ನೆರವಾಗಲಿದೆ. ಮಕ್ಕಳು, ವಯಸ್ಕರು ಸೇರಿದಂತೆ ಎಲ್ಲರೂ ಮಾತ್ರೆ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತಯೆ ಸಲಹೆ ಮಾಡಿದರು.
ಆ.10ರಿಂದ 17ರವರೆಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡಝೋಲ್-400 ಎಂ.ಜಿ ಮಾತ್ರೆಗಳನ್ನು ಉಚಿತವಾಗಿ ನೀಡಿ ಮಕ್ಕಳನ್ನು ಜಂತುಹುಳು ಮುಕ್ತರನ್ನಾಗಿಸಲಾಗುತ್ತಿದೆ. ಸರ್ಕಾರವು ಜಂತುಹುಳು ರೋಗ ನಿವಾರಣೆಗೆ ಆರೋಗ್ಯ ಇಲಾಖೆ ಮೂಲಕ ಕಾರ್ಯಕ್ರಮ ಆಯೋಜಿಸುತ್ತಿದೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ಹೆಣ್ಣುಮಕ್ಕಳಲ್ಲಿನ ರಕ್ತಹೀನತೆ ತಡೆಗಟ್ಟಲು ಜಂತುಹುಳು ನಿವಾರಣಾ ಮಾತ್ರೆ ಸೇವನೆ ಅಗತ್ಯವಾಗಿದೆ. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ಜಂತುಹುಳು ನಿವಾರಣಾ ಮಾತ್ರೆಯಿಂದ ಯಾವುದೇ ಮಗು ವಂಚಿತವಾಗದಂತೆ ಆರೋಗ್ಯ ಇಲಾಖೆ ನೋಡಿಕೊಳ್ಳಬೇಕಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಈ ಮಹತ್ವದ ಕಾರ್ಯಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಮಾತನಾಡಿ, ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿರುವುದು ಎಲ್ಲರಿಗೂ ಅಗತ್ಯವಾಗಿದ್ದು, ಅದಕ್ಕಾಗಿ ಪ್ರತಿಯೊಬ್ಬರು ಅದರಲ್ಲೂ ಮಕ್ಕಳು ಜಂತುಹುಳು ನಿವಾರಣಾ ಮಾತ್ರೆ ತೆಗೆದುಕೊಳ್ಳಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಸುತ್ತಮುತ್ತಲಿನ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‌ಕುಮಾರ್ ಮಾತನಾಡಿ, ಬರಿಗಾಲಿನಲ್ಲಿ ನಡೆಯುವವರ ದೇಹ ಸೇರುವ ಜಂತುಹುಳು ಆಗಾಗ್ಗೆ 2 ಮಿಲಿ ರಕ್ತ ಹೀರುವ ಮೂಲಕ ದೇಹದಲ್ಲಿ ರಕ್ತಹೀನತೆ ಉಂಟುಮಾಡಲಿದೆ. ಜಂತುಹುಳು ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ವರ್ಷಕ್ಕೆ 2 ಬಾರಿ ಫೆಬ್ರವರಿ ಹಾಗೂ ಆಗಸ್ಟ್ ಮಾಹೆಯಲ್ಲಿ ಅಂಗನವಾಡಿ, ಶಾಲಾ-ಕಾಲೇಜುಗಳಲ್ಲಿ ಜಂತುಹುಳು ನಿವಾರಣೆ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ರೇಣುಕಾದೇವಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಪುಟ್ಟಗೌರಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಸುಭದ್ರಾದೇವಿ, ಜಿಲ್ಲಾ ನಿರೂಪಣಾಧಿಕಾರಿ ಮಂಜುಳಾ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶೀಲಾರಾಣಿ, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಸೋಮೇಶ್ವರ್, ಮುಖಂಡ ಬಿ.ಕೆ. ರವಿಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net