ಅಂಬೇಡ್ಕರ್ ವಿಚಾರಧಾರೆ ಸರ್ವಕಾಲಕ್ಕೂ ಪ್ರಸ್ತುತ

 ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪುಸ್ಥಳಿಗೆ ಸಚಿವ ಕೆ.ವೆಂಕಟೇಶ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನ) ಮಾಲಾರ್ಪಣೆ ಮಾಡಿದರು.
ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪುಸ್ಥಳಿಗೆ ಸಚಿವ ಕೆ.ವೆಂಕಟೇಶ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನ) ಮಾಲಾರ್ಪಣೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚವ ಕೆ.ವೆಂಕಟೇಶ್ ಅಭಿಮತ
  • ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ
ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು ಪ್ರಸ್ತುತವಾಗಿದ್ದು, ಅದನ್ನು ಎಲ್ಲರೂ ಅನುರಿಸಬೇಕಾಗಿದೆ ಎಂದು ರೇಷ್ಮೆ, ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವೈವಿಧ್ಯತೆಯ ದೇಶವಾಗಿರುವ ಭಾರತಕ್ಕೆ ಅಗತ್ಯವಾಗಿರುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಡುಗೆ ನೀಡಿದ್ದಾರೆ. ಅವರ ಬಾಲ್ಯದಲ್ಲಿ ಅಪಾರವಾದ ಕಷ್ಟಗಳನ್ನು ಕಂಡು ಮಾನವೀಯತೆ ಮೌಲ್ಯಗಳನ್ನು ಬೆಳೆಸಿಕೊಂಡಿದ್ದರು. ಅಪಾರವಾದ ಅಧ್ಯಯನದಿಂದ ದೇಶಕ್ಕೆ ಮೌಲ್ಯಯುತ ಸಂವಿಧಾನವನ್ನು ನೀಡಿದರು. ಅಂಬೇಡ್ಕರ್ ಎಲ್ಲ ವರ್ಗದ ಜನರಿಗೂ ಸರಿ ಸಮಾನವಾದ ಹಕ್ಕುಗಳು ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರಿಗೂ ಹಕ್ಕು, ಅಧಿಕಾರಗಳನ್ನು ಕಲ್ಪಿಸಿಕೊಟ್ಟರು ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ ಮಾತನಾಡಿ, ಭಾರತದಲ್ಲಿ ನಾವು ಎನ್ನುವುದಕ್ಕೆ ವಿಶಿಷ್ಟವಾದ ಅರ್ಥವಿದೆ. ಒಳ್ಳಗೊಳ್ಳುವಿಕೆ ಎಂಬುದು ಎಲ್ಲ ಜನರ ಕಾರ್ಯಕ್ರಮವಾಗಬೇಕು. ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರಿಗೂ ಹಿತವನ್ನು ಬಯಸುವ ಸಂವಿಧಾನವನ್ನು ನೀಡಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಸಂವಿಧಾನವನ್ನು ಬದಲಿಸುವ ಕೆಲಸಗಳು ನಡೆಯುತ್ತಿರುವ ಕೂಗು ಎದ್ದಿರುವುದರ ವಿರುದ್ಧ ರಕ್ಷಿಸುವ ಚಳುವಳಿ ನಡೆಯುತ್ತಿರುವುದು ದುಃಖದ ಸಂಗತಿಯಾಗಿದೆ. ನಾವು ನಮ್ಮ ತಾಯಿ, ತಂದೆಯನ್ನು ಉಳಿಸಿಕೊಳ್ಳುವ ಚಳುವಳಿ ಮಾಡುತ್ತೇವಾ. ಸಂವಿಧಾನ ಉಳಿದರೆ ಭಾರತ ಉಳಿದಂತೆ ಎಂಬುದನ್ನು ಭಾವಿಸಬೇಕಿದೆ ಎಂದರು.
ಅಂಬೇಡ್ಕರ್ ಬುದ್ಧ, ಕಬೀರ್ ಮತ್ತು ಜ್ಯೋತಿ ಬಾ ಫುಲೆ ಅವರನ್ನು ಗುರುವಾಗಿ ಸ್ವೀಕರಿಸಿದ್ದರು. ರಾಜ ಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಆಶಯವನ್ನು ಅನುಸರಿಸಿದ ಶಾಹು ಮಹಾರಾಜ್, ಬರೋಡಾದ ಸಯಾಜೀ ರಾವ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಮೂರು ದೊರೆಗಳು ಅವರ ಜೀವನದಲ್ಲಿ ಪ್ರಮುಖವಾಗಿದ್ದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಎಂಬ ಮೂರು ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಬುದ್ಧರ ಬಂಧುತ್ವ, ಪ್ರೇಮದ ಮೂಲಕ ದೇವರನ್ನು ಕಂಡ ಕಬೀರ ಆಶಯ ಜಗತ್ತಿಗೆ ಅಗತ್ಯವಾಗಿದೆ. ಜ್ಞಾನದ ಮೂಲಕ ಅಂಬೇಡ್ಕರ್ ಅವರು ಸಮಾಜದಲ್ಲಿ ಕ್ರಾಂತಿ ಮಾಡಿದರು. ಜಗತ್ತಿನಲ್ಲಿ ಇರುವ ಎಲ್ಲ ಜ್ಞಾನವನ್ನು ಅಂಬೇಡ್ಕರ್ ಅವರು ಹುಡುಕಿಕೊಂಡು ಹೋಗುತ್ತಿದ್ದರು. ಅಂಬೇಡ್ಕರ್ ಜಯಂತಿ ನಾಡಿನ ಎಲ್ಲ ಜನರ ಹಬ್ಬವಾಗಬೇಕು ಎಂದರು.
ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದಲ್ಲಿ ಮೊಟ್ಟಮೊದಲು ಮಹಿಳೆಯರಿಗೆ ಸಂವಿಧಾನದ ಮೂಲಕ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದರು ಎಂದು ಹೇಳಿದರು. ಮೈಸೂರಿನ ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣ ಸಿರಿ ಭಂತೇಜಿ ಸಾನಿಧ್ಯ ವಹಿಸಿದ್ದರು. ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ), ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಉಪ ಕಾರ್ಯದರ್ಶಿ ಶೃತಿ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜ್ ಹಾಗೂ ಇತರರು ಹಾಜರಿದ್ದರು.
ಹೆಚ್ಚು ಸಮಯವಿಡಿದ ಮೆರವಣಿಗೆ:
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಪ್ರಾರಂಭವಾದ ಮೆರವಣಿಗೆಗೆ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಕಾಡಾ ಅಧ್ಯಕ್ಷ ಮೊಹಮ್ಮದ್ ಅಸ್ಗರ್ (ಮುನ್ನಾ), ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಸಿಇಓ ಮೋನಾ ರೋತ್ ಚಾಲನೆ ನೀಡಿದರು. ಬಳಿಕ ಪ್ರಾರಂಭವಾದ ಮೆರವಣಿಗೆ ಸತ್ತಿ ರಸ್ತೆ, ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತದ ಮಾರ್ಗವಾಗಿ ವೇದಿಕೆ ಕಾರ್ಯಕ್ರಮ ನಡೆದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಅಂತ್ಯವಾಯಿತು. ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಯುವಕರನ್ನು ಮುಂದೆ ಕಳುಹಿಸುವಲ್ಲಿ ಪೊಲೀಸರು ಮತ್ತು ಮೆರವಣಿಗೆ ಸಮಿತಿಯ ಸದಸ್ಯರು ಹೈರಾಣಾದರು. ಡೊಳ್ಳು ಕುಣಿತ, ನಗಾರಿ, ಕಂಸಾಳೆ, ಮಂಗಳ ವಾದ್ಯ, ಸೋಲಿಗರ ಕುಣಿತ ಹಾಗೂ ಇನ್ನಿತರೆ ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ಛಲವಾದಿ ಮಹಾಸಭಾದ ವತಿಯಿಂದ ಸಿದ್ಧಪಡಿಸಿದ್ದ ಟ್ಯಾಬ್ಲೋ ಅತ್ಯಂತ ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net