ಕೊಳ್ಳೇಗಾಲ:ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಅಂಗವಾಗಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ವಿಜೃಂಭಣೆೆಯಿಂದ ನೆರವೇರಿತು.
ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಅಲಂಕೃತಗೊಂಡಿದ್ದ ವಾನನದ ಮೇಲೆ ಬುದ್ಧನ ವಿಗ್ರಹ ಹಾಗೂ ಅಂಬೇಡ್ಕರ್ ಭಾವಚಿತ್ರವನ್ನು ಇರಿಸಲಾಯಿತು. ಈ ವೇಳೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ಮೆರವಣಿಗೆ ಬಸ್ತೀಪುರ ಮುಖ್ಯ ರಸ್ತೆಯಲ್ಲಿ ಸಾಗಿತು. ವಾದ್ಯ ಇಮ್ಮೇಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಬಸ್ತೀಪುರ ಬಡಾವಣೆ ತಲುಪುತ್ತಿದಂತೆ ಪ್ರತಿ ಮನೆಯಿಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪನಮನ ಸಲ್ಲಿಸಲಾಯಿತು. ಸಂಜೆ ಬಡಾವಣೆಯಲ್ಲಿ ವೇದಿಕೆ ಕಾರ್ಯಕ್ರಮ ನೆರವೇರಿತು.
ಜಯಂತಿ ಏ.17ರಂದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಏ.18 ರಂದು ರಂಗೋಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಬಡಾವಣೆ ಮುಖ್ಯ ರಸ್ತೆಯಲ್ಲಿ ದೀಪಾಲಂಕಾರ ಗಮನ ಸೆಳೆಯಿತು. ಬಡಾವಣೆ ನಿವಾಸಿಗಳು ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಬಸ್ತೀಪುರ ಬಡಾವಣೆಯ ಯಜಮಾನರು, ಮುಖಂಡರು, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಸದಸ್ಯರು ಹಾಗು ಬ್ಲೂ ಸ್ಟಾರ್ ಬಾಯ್ಸ ಪದಾಧಿಕಾರಿಗಳು, ನಿವಾಸಿಗಳಿದ್ದರು.