ಜಲ್ಲಿಪಾಳ್ಯ ಭಾಗದಲ್ಲಿ ಕಾಡಾನೆ ಸೆರೆಗೆ ಕ್ರಮ

ಜಲ್ಲಿಪಾಳ್ಯ ಗ್ರಾಮದಲ್ಲಿ ಡಿಸಿಎಫ್ ಭಾಸ್ಕರ್ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಯಿತು. ಜೀತೇಂದ್ರ, ಅಮ್ಜದ್‌ಖಾನ್, ರಾಜಣ್ಣ, ಮಾದೇಶ್ ಇತರರು ಇದ್ದರು.
ಜಲ್ಲಿಪಾಳ್ಯ ಗ್ರಾಮದಲ್ಲಿ ಡಿಸಿಎಫ್ ಭಾಸ್ಕರ್ ಅಧ್ಯಕ್ಷತೆಯಲ್ಲಿ ರೈತರ ಸಭೆ ನಡೆಯಿತು. ಜೀತೇಂದ್ರ, ಅಮ್ಜದ್‌ಖಾನ್, ರಾಜಣ್ಣ, ಮಾದೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಎಫ್ ಭಾಸ್ಕರ್ ಭರವಸೆ
  • ಬೆಳೆ ನಷ್ಟಕ್ಕೆ ಇಲಾಖೆಯಿಂದ ಪರಿಹಾರ
ಹನೂರು: ಜಲ್ಲಿಪಾಳ್ಯ ಭಾಗದಲ್ಲಿ ಹಾವಳಿ ನಡೆಸುತ್ತಿರುವ ಕಾಡಾನೆ ಸೆರೆಗೆ ಹಾಗೂ ಬೆಳೆ ನಷ್ಟಕ್ಕೆ ಇಲಾಖೆಯಿಂದ ಪರಿಹಾರ ನೀಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್ ಭಾಸ್ಕರ್ ತಿಳಿಸಿದರು.
ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆ ದಾಳಿಗೆ ಒಳಗಾದ ಚಿನ್ನಪ್ಪ ಅವರ ಜಮೀನಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಆಯೋಜಿಸಿದ್ದ ರೈತರು ಹಾಗೂ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಇರಲಿಲ್ಲ. ಆದರೆ ಇತ್ತೀಚೆಗೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಜನಸಂಖ್ಯೆಯ ಹೆಚ್ಚಳವು ಕಾರಣವಾಗಿದೆ. ಈ ಭಾಗದಲ್ಲಿ ಕಾಡಾನೆಯೊಂದು ಮನುಷ್ಯರ ಮೇಲೆ ದಾಳಿ ನಡೆಸುತ್ತಿರುವುದು ವಿಪರ್ಯಾಸ. ಈ ಸಂಬಂಧ ಶಿಬಿರವನ್ನು ತೆರೆದು ಸಿಬ್ಬಂದಿ ನಿಯೋಜಿಸುವ ಮೂಲಕ ಕಾಡಾನೆಯ ಚಲನವಲನದ ಬಗ್ಗೆ ನಿಗಾ ವಹಿಸಲಾಗುವುದು. ಕಾಡಾನೆ ಮನುಷ್ಯರ ಮೇಲೆ ದಾಳಿ ನಡೆಸುವ ಮುನ್ಸೂಚನೆ ಇದ್ದರೆ ಕೂಡಲೇ ಸೆರೆ ಹಿಡಿಯಲಾಗುವುದು ಎಂದರು.
ಇನ್ನು ಬೆಳೆನಷ್ಟದ ಪರಿಹಾರದ ವಿಚಾರವಾಗಿ ನಿಯಮಾನುಸಾರ ಅಗತ್ಯ ಕ್ರಮವಹಿಸಲಾಗಿದೆ. ಆದರೆ ರೈತರು, ಸಂಘಸಂಸ್ಥೆಗಳು ಹಾಗೂ ಶಾಸಕರ ಬೇಡಿಕೆಯಂತೆ ಸರ್ಕಾರದಿಂದ ನೀಡಲಾಗುವ ಪರಿಹಾರ ಹೆಚ್ಚಿಸುವಂತೆ ಒತ್ತಾಯವಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಈ ವರ್ಷದಲ್ಲಿ ಬಾಕಿ ಇದ್ದ 10 ಲಕ್ಷ ರೂ. ಪರಿಹಾರದ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ವಿಳಂಬ ಮಾಡದೆ ಬೆಳೆ ನಷ್ಟಕ್ಕೆ ಶೀಘ್ರ ಪರಿಹಾರ ದೊರಕಿಸಿಕೊಡಲಾಗುವುದು. ಇನ್ನು ಇತ್ತೀಚೆಗೆ ಕಾಡಾನೆ ದಾಳಿಯಿಂದ ಕಾಲು ಮುರಿತಕ್ಕೆ ಒಳಗಾದ ಚಿನ್ನಪ್ಪ ಅವರ ವೈದ್ಯಕೀಯ ವೆಚ್ಚವನ್ನು ಇಲಾಖೆಯಿಂದಲೇ ಭರಿಸಲಾಗುವುದು. ಒಂದು ವೇಳೆ ಅವರಿಗೆ ಅಂಗವಿಕಲತೆ ಉಂಟಾಗಿದ್ದಲ್ಲಿ ಮಾನವೀಯತೆ ದೃಷ್ಟಿಯಿಂದ ಕೆಲಸ ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ಈ ಭಾಗದಲ್ಲಿ ಕಾಡಾನೆಯೊಂದರ ಹಾವಳಿ ವಿಪರೀತವಾಗಿದ್ದು, ಮನುಷ್ಯರ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿದೆ. ಇತ್ತ ಕಾಡು ಹಂದಿಗಳು ಜಮೀನಿಗೆ ಲಗ್ಗೆಯಿಟ್ಟು ಫಸಲನ್ನು ನಾಶಪಡಿಸುತ್ತಿದೆ. ಆದರೆ ಬೆಳೆನಷ್ಟಕ್ಕೆ ಪರಿಹಾರ ನೀಡುತ್ತಿಲ್ಲ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಮನವಿ ಮಾಡಿದರು. ಆರ್‌ಎಫ್‌ಒ ಜೀತೇಂದ್ರ, ರೈತ ಮುಖಂಡರಾದ ರಾಜಣ್ಣ, ಪಳನಿಸ್ವಾಮಿ, ಮಾದೇಶ್, ನಾಗರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net