ಉತ್ತಮ ಸ್ಥಾನ ಪಡೆದು ಪಾಲಕರ ಮೊಗದಲ್ಲಿ ನಗು ಮೂಡಿಸಿ

ಹನೂರಿನಲ್ಲಿ ಗೌತಮ್ ಇಂಗ್ಲಿಷ್ ಪಬ್ಲಿಕ್ ಶಾಲೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎಂ.ಆರ್ ಮಂಜುನಾಥ್ ಉದ್ಘಾಟಿಸಿದರು. ಸಾವಕಯ್ಯ, ರವೀಂದ್ರ, ಚೆನ್ನಪ್ಪ, ಮಹೇಶ್ ಇತರರು ಇದ್ದರು.
ಹನೂರಿನಲ್ಲಿ ಗೌತಮ್ ಇಂಗ್ಲಿಷ್ ಪಬ್ಲಿಕ್ ಶಾಲೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎಂ.ಆರ್ ಮಂಜುನಾಥ್ ಉದ್ಘಾಟಿಸಿದರು. ಸಾವಕಯ್ಯ, ರವೀಂದ್ರ, ಚೆನ್ನಪ್ಪ, ಮಹೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಸಲಹೆ
  • ಮಕ್ಕಳ ಹಬ್ಬ ಕಾರ್ಯಕ್ರಮ
ಹನೂರು: ಗೌತಮ್ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿರುವುದು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ ಎಂದು ಶಾಸಕ ಎಂ.ಆರ್.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. 
ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಶನಿವಾರ ಗೌತಮ್ ಇಂಗ್ಲಿಷ್ ಪಬ್ಲಿಕ್ ಶಾಲೆಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸಮಾರಂಭದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರ ಆಶಯ ನಮ್ಮ ಮಕ್ಕಳು ಉನ್ನತ ಸ್ಥಾನ ಪಡೆದು ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎನ್ನುವುದಾಗಿದೆ. ಹಾಗಾಗಿ ಮಕ್ಕಳ ಶಿಕ್ಷಣಕ್ಕೆ ಇನ್ನಿಲ್ಲದ ಶ್ರಮ ವಹಿಸುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಪಾಲಕರ ಆಶಯವನ್ನು ಮನದಟ್ಟು ಮಾಡಿಕೊಂಡು ನಿರ್ದಿಷ್ಟ ಗುರಿ ಹೊಂದಿ ಓದಿನ ಕಡೆ ಹೆಚ್ಚು ಗಮನಹರಿಸುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಉನ್ನತ ಸ್ಥಾನವನ್ನು ಗಳಿಸಬೇಕು. ಪಾಲಕರ ಮೊಗದಲ್ಲಿ ನಗು ತರಬೇಕು. ಇದರಿಂದ ಸಾರ್ಥಕತೆ ಎನಿಸುತ್ತದೆ. ಜತೆಗೆ ಸಾಧಕರ ಆತ್ಮಚರಿತ್ರೆಯ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಗುರಿ ಸಾಧಿಸಲು ಸ್ಫೂರ್ತಿ ಸಿಗುತ್ತದೆ. ಇನ್ನು ಗೌತಮ್ ಶಿಕ್ಷಣ ಸಂಸ್ಥೆಯು ಕಳೆದ 15 ವರ್ಷದಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಮೆಚ್ಚುಗೆಯ ಸಂಗತಿ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವುದರ ಮೂಲಕ ಸಂಸ್ಥೆಯು ಉನ್ನತಿ ಸ್ಥಾನ ಪಡೆಯಬೇಕು ಎಂದು ಆಶಿಸಿದರು.  
ಸಾಹಿತಿ ಹನೂರು ಚೆನ್ನಪ್ಪ ಮಾತನಾಡಿ, ಗೌತಮ್ ಸಂಸ್ಥೆಯು ಇನ್ನಿತರ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವುದರ ಜತೆಗೆ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಆದ್ದರಿಂದ ಪ್ರತಿಯೊಬ್ಬರೂ ಓದಿಗೆ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. 
ಸಾಧಕಿ ಸೌಮ್ಯಾಗೆ ಉತ್ತೇಜನ:  ಇದೇ ವೇಳೆ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಏಷಿಯನ್ ಪ್ಯಾರಾಗೇಮ್ಸ್‌ನಲ್ಲಿ 2 ಚಿನ್ನದ ಪಡದ ಪಡೆದು ಭಾರತಕ್ಕೆ ಕೀರ್ತಿ ತಂದು ಕೊಟ್ಟ ತಾಲೂಕಿನ ರಾಮಾಪುರದ ಗೆಜ್ಜಲನತ್ತ ಗ್ರಾಮದ ಸೌಮ್ಯಾ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪತ್ನಿ ಶಿಕ್ಷಕಿ ಶಿವರಾಜಮ್ಮ ಅವರು 10 ಸಾವಿರ ರೂ. ನಗದು ನೀಡಿ ಮುಂದಿನ ಕ್ರೀಡಾಕೂಟಕ್ಕೆ ಉತ್ತೇಜನ ನೀಡಿದರು. 
ಈ ವೇಳೆ ಸಾಧಕಿ ಸೌಮ್ಯಾ ಮಾತನಾಡಿ, ಪ್ಯಾರಾಗೇಮ್ಸ್‌ನಲ್ಲಿ 2 ಚಿನ್ನದ ಪದಕ ಗೆದ್ದ ಹಾಗೆ ಮುಂದಿನ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗಳಿಸುತ್ತೇನೆ.ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು. 
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾತ್ರಿ 10 ರವರೆಗೂ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮವು ನೆರೆದಿದ್ದವರ ಮನ ಗೆದ್ದಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಾವಕಯ್ಯ, ಕಾರ್ಯದರ್ಶಿ ರವೀಂದ್ರ, ಬಿಇಒ ಮಹೇಶ್, ಬಿಆರ್‌ಸಿ ವೆಂಕಟೇಶ್, ಮೈಸೂರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಹದೇವಸ್ವಾಮಿ, ಸಮಾಜ ಸೇವಕರಾದ ಪೆದ್ದನಪಾಳ್ಯ ಮಣಿ, ಮಾದಪ್ಪ, ಪಪಂ ಮಾಜಿ ಸದಸ್ಯ ಸಿದ್ದರಾಜು ಮುಖ್ಯ ಶಿಕ್ಷಕ ನಿಂಗರಾಜು ಹಾಗೂ ಇನ್ನಿತರರು ಇದ್ದರು.       
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net