ರಾಜ್ಯದಲ್ಲಿ ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರ, ಕಾಳಿ ಒಟ್ಟು 5 ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಿವೆ. ಇವುಗಳಲ್ಲಿ ಮೂರು ಅಭಯಾರಣ್ಯಗಳು ಮೈಸೂರು ಭಾಗದಲ್ಲೇ ಇವೆ. 2022 ಅಖಿಲ ಭಾರತ ಹುಲಿ ಗಣತಿ ಪ್ರಕಾರ, ದೇಶದಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 563 ಹುಲಿಗಳಿದ್ದು, ಮೈಸೂರು ಭಾಗದ ಬಂಡೀಪುರದಲ್ಲಿ 150, ನಾಗರಹೊಳೆಯಲ್ಲಿ 141, ಬಿಆರ್‌ಟಿಯಲ್ಲಿ 44 ಹುಲಿಗಳು ಲೆಕ್ಕಕ್ಕೆ ಸಿಕ್ಕಿದ್ದವು. ಪ್ರಸ್ತುತ ವರ್ಷದಲ್ಲಿ ಹುಲಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿರುವುದನ್ನು ಸಹಜವಾಗಿಯೇ ಅಂದಾಜಿಸಬಹುದು. ಪ್ರತಿದಿನ ಒಂದಿಲ್ಲೊಂದು ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡ ಆತಂಕ ಸೃಷ್ಟಿಸುತ್ತಿರುವುದೂ ಕಾಣುತ್ತಿದೆ. ಹುಲಿಗಳ ಸೆರೆಗಾಗಿ ಸಾರ್ವಜನಿಕರಿಂದ ನಿತ್ಯವೂ ಕರೆಗಳು ಬರುತ್ತಿವೆ.