ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ಅನ್ನದಾತ

ಬೂದಿತಿಟ್ಟು ಗ್ರಾಮದ ಜಿ.ಕುಮಾರ್ ಅವರ ಜಮೀನನಲ್ಲಿ ಬೆಳೆದಿರುವ ಬಾಳೆ ಗಿಡಗಳು
ಬೂದಿತಿಟ್ಟು ಗ್ರಾಮದ ಜಿ.ಕುಮಾರ್ ಅವರ ಜಮೀನನಲ್ಲಿ ಬೆಳೆದಿರುವ ಬಾಳೆ ಗಿಡಗಳು
Published on
ಕೊಳ್ಳೇಗಾಲ: ಕೃಷಿಯನ್ನೆ ಅವಲಂಬಿಸಿ ಜೀವನ ಕಟ್ಟಿಕೊಂಡಿರುವ ಅವರು ಭೂಮಿ ಫಲವತ್ತತೆ ಸಂರಕ್ಷಣೆಗಾಗಿ ಸಾವಯವ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.
ತಾಲೂಕಿನ ಬೂದಿತಿಟ್ಟು ಗ್ರಾಮದ ಲೇ.ಗುರುಮಲ್ಲಪ್ಪ ಅವರ ಮಗ ಜಿ.ಕುಮಾರ್ ಅವರು ಕಳೆದ ಇಪ್ಪತೈದು ವರ್ಷಗಳಿಂದ ಕೃಷಿಯನ್ನೆ ನಂಬಿ ಬದುಕುತ್ತಿದ್ದಾರೆ. ಇರುವ 5 ಎಕರೆ ಜಮೀನಿನಲ್ಲಿ ಪ್ರಾಯೋಗಿಕವಾಗಿ 1 ಎಕರೆ ಬಾಳೆಯನ್ನು ಬೆಳೆದು ಲಾಭ ಗಳಿಸಿದ್ದಾರೆ. ಇದೀಗ ಎರಡನೇ ಅವಧಿಗೂ ಅದೇ ಬಾಳೆ ಆಳೆತ್ತರಕ್ಕೆ ಬೆಳೆದು ನಿಂತಿದೆ. ಇನ್ನುಳಿದ 4 ಎಕರೆ ಜಮೀನಿನಲ್ಲಿ 3 ಎಕರೆಯಲ್ಲಿ ಜೋಳ, 1 ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಹಂತ-ಹಂತವಾಗಿ ಸಂಪೂರ್ಣ ಕೃಷಿ ಭೂಮಿಯನ್ನು ಸಾವಯವ ಪದ್ಧತಿಯಲ್ಲಿ ನಡೆಸಲು ಪಣ ತೊಟ್ಟಿದ್ದಾರೆ.
ತೆಂಗು ತರುವ ಆದಾಯ: ಜಮೀನು ಸುತ್ತಲೂ 80 ಕ್ಕೂ ಹೆಚ್ಚಿ ಫಲ ಕೊಡುವ ತೆಂಗಿನ ಮರಗಳಿವೆ. 1 ಅಥವಾ 2 ತಿಂಗಳಿಗೊಮ್ಮೆ ತೆಂಗು ಕಟಾವು ಮಾಡಲಾಗುತ್ತದೆ. ಜಮೀನಿನಲ್ಲಿ ಬೆಳೆದ ವಿವಿಧ ಬೆಳೆಗಳ ಮಾರುಕಟ್ಟೆಯ ಲಾಭ-ನಷ್ಟದ ಏರಿಳಿತವನ್ನು ತೆಂಗಿನ ಆದಾಯ ಸರಿದೂಗಿಸುತ್ತದೆ. ವರ್ಷಕ್ಕೆ ಲಕ್ಷಾಂತರ ರೂ. ಆದಾಯ ತರುತ್ತಿದೆ.
ಕೈ ಹಿಡಿದ ಜೀವಾಮೃತ : ಹಿಂದಿನಿಂದಲೂ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಕೃಷಿ ಮಾಡುವುದು ರೂಢಿಯಾಗಿತ್ತು. ಹೆಚ್ಚಿನ ಇಳುವರಿಗಾಗಿ ಬಳಕೆ ಮಾಡಿದ ರಾಸಾಯನಿಕ ಗೊಬ್ಬರ ಮಣ್ಣಿನ ಫಲವತ್ತತೆಯನ್ನು ತಗ್ಗಿಸುತ್ತದೆ. ಮುಂದಿನ ಪೀಳಿಗೆಯ ಕೃಷಿಗೆ ಮಾರಕ ವಾಗಲಿದೆ ಎಂದು ಅರಿತು ರೈತ ಜಿ.ಕುಮಾರ್ ಅವರು ಸ್ನೇಹಿತರಾದ ಕುಮಾರ್, ಮಹದೇವಸ್ವಾಮಿ ಅವರ ಸಲಹೆಯಂತೆ ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ.
ಪ್ರಾಯೋಗಿಕವಾಗಿ 1 ಎಕರೆಯಲ್ಲಿ ಬೆಳೆದ ಏಲಕ್ಕಿ ಬಾಳೆಗೆ ಬೇವಿನ ಹಿಂಡಿ, ಕೊಟ್ಟಿಗೆ ಗೊಬ್ಬರ ಹಾಗೂ ಗಂಜಲ ಕಡಲೆ ಹಿಟ್ಟು, ಸಾವಯವ ಬೆಲ್ಲ, ಎಕ್ಕದ ಗಿಡ, ದ್ವಿದಳ ಧಾನ್ಯಗಳ ಹಿಟ್ಟು ಮಿಶ್ರಣ ಮಾಡಿ ಕೊಳೆಯಿಸಿ ತಯಾರಿಸಿದ ಜೀವಾಮೃತವನ್ನು ಒದಗಿಸಿದ್ದಾರೆ. ಮೊದಲ ಬಾರಿ ಜೀವಾಮೃತ, ಕೊಟ್ಟಿಗೆ ಗೊಬ್ಬರ ಕೃಷಿ ಯಶಸ್ಸು ತಂದಿರುವುದು ಅವರಿಗೆ ಹುಮ್ಮಸ್ಸು ತಂದಿದೆ. ಸಂಪೂರ್ಣ ಸಾವಯವ ಪದ್ಧತಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದಾರೆ. ಮನೆಯಲ್ಲಿ 3 ಸಾಕು ಹಸುಗಳಿದ್ದು, ಸಾವಯವ ಕೃಷಿಗೆ ಅಗತ್ಯವಿರುವ ಗಂಜಳ, ಕೊಟ್ಟಿಗೆ ಗೊಬ್ಬರವನ್ನು ಒದಗಿಸಿ ಕೊಡುತ್ತಿದೆ.
ತಗ್ಗಿದ ಖರ್ಚು : ರಾಸಾಯನಿಕ ಗೊಬ್ಬರ ಬಳಸಿ ಮಾಡುವ ಕೃಷಿಗಿಂತ ಸಾವಯವ ಮಾದ ರಿಯ ಕೃಷಿಯಿಂದ ಖರ್ಚು ತಗ್ಗಿದೆ. ಬೆಳೆದ ಫಸಲು ಲಾಭವನ್ನು ತಂದು ಕೊಟ್ಟಿದೆ. ಎಲ್ಲಕ್ಕಿಂತಲೂ ಭೂಮಿ ಉಳಿಸುವ ಕಾಯಕವನ್ನು ಆರಂಭಿಸಿದ್ದೇವೆ ಎಂಬ ಸಂತೋಷವಿದೆ ಎನ್ನುವ ಜಿ.ಕುಮಾರ್ ಸಾವಯವ ಕೃಷಿ ಮೇಲೆ ನಂಬಿಕೆ ಬಂದಿದ್ದು, ಇದನ್ನು ಮುಂದುವರೆಸುವ ತೀರ್ಮಾನಕ್ಕೆ ಬಂದಿದ್ದಾರೆ.
1 ಗೊನೆಗೂ ಬರಲಿಲ್ಲ ಮಾರು: ಹಲವು ವರ್ಷಗಳಿಂದ ರಾಸಾಯನಿಕ ಗೊಬ್ಬರಕ್ಕೆ ಒಗ್ಗಿರುವ ಭೂಮಿ ತಕ್ಷಣಕ್ಕೆ ಜೀವಾಮೃತ, ಕೊಟ್ಟಿಗೆ ಗೊಬ್ಬರ ಕೃಷಿಗೆ ಒಗ್ಗುವುದಿಲ್ಲ. ಇದರಿಂದ ನಷ್ಟ ಉಂಟಾಗಬಹುದು. ಬೆಳೆ ಮಾರು ಬೀಳಬಹುದು, ಇಳುವರಿ ಕಡಿಮೆ ಆಗಬಹುದೆಂಬ ಅಳುಕಿನ ನಡುವೆ ಸಾವಯವ ಕೃಷಿ ಮಾಡಿದ್ದರು. ತೆಗೆದುಕೊಂಡ ನಿರ್ಧಾರಕ್ಕೆ ಆರಂಭದಲ್ಲಿಯೇ ಉತ್ತಮ ಫಲಿತಾಂಶ ಬಂದಿದೆ. 1 ಎಕರೆಯಲ್ಲಿ 8 ಟನ್ ಬಾಳೆ ದೊರೆಯಿತು. ಬಹುತೇಕ ಗೊನೆಯು 16 ರಿಂದ 18 ಕೆಜಿ ತೂಕವಿತ್ತು. ಒಂದು ಗೊನೆಗೂ ಮಾರು ಬಂದಿರಲ್ಲ. ಒಂದೂವರೆ ಲಕ್ಷ ಖರ್ಚು ತಗಲಿದ್ದು. 6 ಲಕ್ಷ ರೂ.ಗೆ ಬಾಳೆ ಮಾರಾಟ ಮಾಡಿದ್ದಾರೆ. ಹೀಗಾಗಿ ಸಾವಯವ ಕೃಷಿ ಇವರಿಗೆ ಲಾಭ ತಂದುಕೊಟ್ಟಿದೆ.
ಕೃಷಿ ಅವಲಂಬಿತ ಕುಟುಂಬ: ರೈತ ಜಿ.ಕುಮಾರ್ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದಾರೆ. ತಂದೆ ಅವರ ಮಾರ್ಗದರ್ಶನದಂತೆ ಕೃಷಿ ಕಾಯದಲ್ಲಿ ತೊಡಗಿ ಇದೀಗ ಸ್ವತಂತ್ರವಾಗಿ 20 ವರ್ಷಗಳಿಂದ ಒಬ್ಬರೆ ಕೃಷಿ ಕಾಯಕ ನಡೆಸುತ್ತಿದ್ದಾರೆ. ಈ ಕುಟುಂಬಕ್ಕೆ ಕೃಷಿಯೇ ಆಧಾರ, ಬಲವಾಗಿದೆ. ಸಾವಯವ ಕೃಷಿ ಅಳವಡಿಸಿಕೊಂಡು ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net