ಅಸಮಾನತೆ ತೊಡೆದು ಹಾಕಲು ಹೋರಾಡಿದ ಸಾಮಾಜಿಕ ಹರಿಕಾರ

ಹನೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು. ಕೆ.ಎನ್ ಚೈತ್ರಾ, ಮಹೇಶ್, ಸೋಮಶೇಖರ್, ಉದ್ದನೂರು ಪ್ರಸಾದ್, ಬಸವರಾಜಪ್ಪ ಇತರರಿದ್ದರು.
ಹನೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಸವ ಜಯಂತಿಯನ್ನು ಆಚರಿಸಲಾಯಿತು. ಕೆ.ಎನ್ ಚೈತ್ರಾ, ಮಹೇಶ್, ಸೋಮಶೇಖರ್, ಉದ್ದನೂರು ಪ್ರಸಾದ್, ಬಸವರಾಜಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ಆರ್.ಮಂಜುನಾಥ್ ಬಣ್ಣನೆ
ಹನೂರು: ಸಮಾಜದಲ್ಲಿದ್ದ ಅಸಮಾನತೆಯನ್ನು ತೊಡೆದು ಹಾಕುವುದರ ಮೂಲಕ ಜಾತಿ ಭೇದ ನೀತಿಯ ವಿರುದ್ಧ ಹೋರಾಡಿದ ಸಾಮಾಜಿಕ ಹರಿಕಾರ ಬಸವಣ್ಣ ಎಂದು ಶಾಸಕ ಎಂ.ಆರ್ ಮಂಜುನಾಥ್ ಶ್ಲಾಘಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಅಸಮಾನತೆ ತಾಂಡವವಾಡುತ್ತಿತ್ತು. ಆ ಕಾಲಘಟ್ಟದಲ್ಲಿ ಅನೇಕ ಸಮಾಜ ಸುಧಾರಕರು ಜನ್ಮ ತಾಳಿದರು. ಇವರಲ್ಲಿ ಶ್ರೀ ಬಸವೇಶ್ವರರು ಒಬ್ಬರು. ಇವರು ಅನುಭವ ಮಂಟಪವನ್ನು ಸ್ಥಾಪಿಸುವುದರ ಮೂಲಕ ಎಲ್ಲ ವರ್ಗದ ಜನರಿಗೆ ಹಾಗೂ ಸ್ತ್ರೀಯರ ಸಮಾನತೆಗೆ ಅವಕಾಶ ಕಲ್ಪಿಸಿಕೊಟ್ಟ ಸಮಾಜ ಸುಧಾರಕ. ಇವರ ವಚನಗಳು ಉತ್ತಮ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಇವರು ಪ್ರತಿಪಾದಿಸಿದ ಕಾಯಕವೇ ಕೈಲಾಸ ತತ್ವ. ಎಲ್ಲ ವರ್ಗದ ಜನರಲ್ಲೂ ಕಾಯಕದ ಮಹತ್ವವನ್ನು ಸಾರುತ್ತದೆ. ಆದ್ದರಿಂದ ಇವರ ಆದರ್ಶ ಹಾಗೂ ಚಿಂತನೆಗಳು ಉತ್ತಮ ಸಮಾಜಕ್ಕೆ ದಾರಿದೀಪವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್ ಮಾತನಾಡಿ, ಶ್ರೀಬಸವೇಶ್ವರರು 12ನೇ ಶತಮಾನದಲ್ಲಿ ಅಸಮಾನತೆಯನ್ನು ಹೋಗಲಾಡಿಸುವುದರ ಮೂಲಕ ಕಲ್ಯಾಣ ರಾಜ್ಯಕ್ಕೆ ಶ್ರಮಿಸಿದ ಸಾಂಸ್ಕೃತಿಕ ನಾಯಕ. ಇಂದಿನ ಸಂಸತ್ತು ಕಲ್ಪನೆಯನ್ನು ಅಂದಿನ ಕಾಲದಲ್ಲೇ ಅನುಭವ ಮಂಟಪವನ್ನು ಸ್ಥಾಪಿಸಿದ ಸಮಾನತೆಯ ಹರಿಕಾರ. ಇವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದು ತಿಳಿಸಿದರು.
ಪಟ್ಟಣದಲ್ಲಿ ಶ್ರೀಬಸವೇಶ್ವರರ ಪುತ್ಥಳಿ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನೆರವೇರಿಸುವಂತೆ ಸಮುದಾಯದ ಮುಖಂಡರು ಮನವಿ ಮಾಡಿದರು. ಇದಕ್ಕೆ ಶಾಸಕರು ಕಾಲಾವಕಾಶದ ಅಗತ್ಯತೆ ಇದ್ದು, ಅಗತ್ಯ ಕ್ರಮವಹಿಸಲಾಗಿದೆ ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಕೆ.ಎನ್ ಚೈತ್ರಾ, ಬಿಇಒ ಮಹೇಶ್, ಪಪಂ ಮುಖ್ಯಾಧಿಕಾರಿ ರೇಖಾ, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಹಾಲಿ ಸದಸ್ಯ ಉದ್ದನೂರು ಪ್ರಸಾದ್, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ನಿರ್ದೇಶಕ ಬಸವರಾಜಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ನಿರ್ದೇಶಕ ವಿನೋದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net