ವಿಷ ಮತ್ತು ಉರುಳು: ಮಲೆ ಮಹದೇಶ್ವರ ವನ್ಯಜೀವಿಧಾಮವಿರುವ ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ 6 ದನಗಳು ಹಾಗೂ ಗುನ್ನೂರು ಬಯಲು ಪಳನಿಮೇಡು ಗ್ರಾಮದ 5 ದನಗಳು ಮೇವು ಮೇಯಲು ಹೋಗಿದ್ದಾಗ ನೀರು ಕುಡಿದು ಮರಣಹೊಂದಿದವು. ದನಗಳ ಮರೋಣೋತ್ತರ ಪರೀಕ್ಷೆಯಲ್ಲಿ ವಿಷಯುಕ್ತ ನೀರು ಸೇವಿಸಿರುವುದರಿಂದ ಜಾನುವಾರುಗಳು ಮರಣ ಹೊಂದಿರುತ್ತದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿತು. ಈ ರೀತಿ ನೀರಿಗೆ ವಿಷ ಹಾಕಿರುವ ಉದ್ದೇಶದ ಹಿಂದೆ ವನ್ಯಜೀವಿಗಳ ಬೇಟೆಗಾರಿಕೆ ಅಡಗಿದೆ. ಕಾಡುಪ್ರಾಣಿಗಳು ವಿಷಯುಕ್ತ ನೀರು ಕುಡಿದ ಸಾಯುವ ಬದಲು ಅರಣ್ಯಕ್ಕೆ ಮೇವು ಮೇಯಲು ಹೋಗಿದ್ದ ಹಸು ಮತ್ತು ದನಗಳು ಮೃತಪಟ್ಟಿವೆಯಷ್ಟೆ. ಈ ಪ್ರಕರಣದಲ್ಲಿ ನೀರಿಗೆ ವಿಷ ಹಾಕಿದ್ದ ಆರೋಪಿ ಪತ್ತೆಗಾಗಿ ರಾಮಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಭಾನುವಾರ ಬೆಳಕಿಗೆ ಬಂದ ಹುಲಿ ಸಾವಿನ ಪ್ರಕರಣದಲ್ಲೂ ಬೇಟೆಗಾರಿಕೆಯ ಕರಾಳಮುಖವಾಡ ಬಹಿರಂಗಗೊಂಡಿದೆ. ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ 5-6 ವರ್ಷದ ಗಂಡು ಹುಲಿ ನೀರಿನಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಮೇಲ್ನೋಟಕ್ಕೆ ಉರುಳಿಗೆ ಸಿಲುಕಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬೇಟೆಗಾರರ ಜಾಲ ಸಕ್ರಿಯವಾಗಿ ಇರದಿದ್ದರೆ ಉರುಳು ಕಾಡಿನೊಳಗೆ ಬರಲು ಹೇಗೆ ಸಾಧ್ಯ?, ಸಾಮಾನ್ಯವಾಗಿ ಹುಲಿಗಳ ಬೇಟೆಗಾಗಿ ಉರುಳು ಬಳಕೆ ಮಾಡಲಾಗುತ್ತದೆ. ಬೇಟೆಗಾರರ ಬೇಟೆ ಹುಲಿಯೇ ಆಗಿತ್ತೇ?, ಇಂತಹ ಕೃತ್ಯ ಎಸಗಲು ತಂಡವಿದೆಯೇ?, ದಟ್ಟ ಅರಣ್ಯದಲ್ಲಿ ಗಸ್ತು ನಡೆಸುವ ಸಿಬ್ಬಂದಿ ಉರುಳನ್ನು ಮೊದಲೇ ಪತ್ತೆ ಹಚ್ಚಲು ಸಾಧ್ಯವಾದೆ ಇರಬಹುದು. ಆದರೆ ಇದಕ್ಕೂ ಮೊದಲೇ ಉರುಳು ಇಡಲು ಬಂದ ಬೇಟೆಗಾರರ ಚಲನವಲನವನ್ನು ಕಂಡುಹಿಡಿಯಬೇಕಿತ್ತಲೇ ಎನ್ನವ ಅನುಮಾನಗಳು ಮೂಡಿದ್ದು, ಅರಣ್ಯ ಇಲಾಖೆಯ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ.