ಭತ್ತ ತುಂಬಿದ್ದ ಲಾರಿ ಮಗುಚಿ ಇಂಜಿನ್ ಬೆಂಕಿಗಾಹುತಿ

ಹನೂರಿನಿಂದ ಎಲ್ಲೇಮಾಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.
ಹನೂರಿನಿಂದ ಎಲ್ಲೇಮಾಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು.
Published on
ಹನೂರು: ಪಟ್ಟಣದಿಂದ ಎಲ್ಲೇಮಾಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಗುರುವಾರ ನಿಯಂತ್ರಣ ತಪ್ಪಿದ ಪರಿಣಾಮ ಭತ್ತ ತುಂಬಿದ ಲಾರಿಯೊಂದು ಮಗುಚಿದ್ದು, ಇಂಜಿನ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಮಂಡ್ಯದ ಕಿರುಗಾವಲಿನಿಂದ ಲಾರಿಯೊಂದು ಭತ್ತದ ಮೂಟೆಗಳನ್ನು ತುಂಬಿಕೊಂಡು ತಮಿಳುನಾಡಿನ ರಾಜ್ಯಪಾಳ್ಯಂ ಕಡೆಗೆ ತೆರಳುತ್ತಿತ್ತು. ಈ ವೇಳೆ ಪಟ್ಟಣದ ಹೊರವಲಯದ ಎಲ್ಲೇಮಾಳಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಲಾರಿಯು ಮಗಚಿದ್ದು, ಕ್ಷಣಾರ್ಧದಲ್ಲೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಲಾರಿಯ ಇಂಜಿನ್ ಹೊತ್ತಿ ಉರಿಯುತ್ತಿದ್ದಂತೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎರಡೂ ಬದಿಯ ವಾಹನ ಸವಾರರು ಭಯಭೀತರಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದರು.
ಈ ಬಗ್ಗೆ ಸ್ಥಳೀಯರು ಸುದ್ದಿ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವುದರ ಮೂಲಕ ಮುಂದಾಗುವ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಇನ್‌ಸ್ಪೆಕ್ಟರ್ ಆನಂದ್ ಮೂರ್ತಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net