ಕೊಳ್ಳೇಗಾಲದಲ್ಲಿ ನೆಲಕ್ಕುರುಳಿದ ದೊಡ್ಡ ಆಲದ ಮರ

ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನ ಆವರಣದಲ್ಲಿದ್ದ ನೂರಕ್ಕೂ ಹೆಚ್ಚು ವರ್ಷದ ಹಳೆಯದಾದ ದೊಡ್ಡ ಆಲದ ಮರವು ನೆಲಕ್ಕುರುಳಿರುವುದು.
ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನ ಆವರಣದಲ್ಲಿದ್ದ ನೂರಕ್ಕೂ ಹೆಚ್ಚು ವರ್ಷದ ಹಳೆಯದಾದ ದೊಡ್ಡ ಆಲದ ಮರವು ನೆಲಕ್ಕುರುಳಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನೂರಕ್ಕೂ ಹೆಚ್ಚು ವರ್ಷ ಇತಿಹಾಸ
  • ವಾಕಿಂಗ್ ಪಾತ್‌ಗೆ ಹಾನಿ
ಕೊಳ್ಳೇಗಾಲ: ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿದ್ದ ನೂರಕ್ಕೂ ಹೆಚ್ಚು ವರ್ಷದ ಹಳೆಯದಾದ ದೊಡ್ಡ ಆಲದ ಮರ ಶುಕ್ರವಾರ ತಡರಾತ್ರಿ ನೆಲಕ್ಕುರುಳಿದೆ.
ತಾಲೂಕು ವ್ಯಾಪ್ತಿಯಲ್ಲಿ ನೂರು ವರ್ಷ ಇತಿಹಾಸ ಇರುವ ಕೆಲವು ಮರಗಳಲ್ಲಿ ಈ ಮರವು ಒಂದಾಗಿತ್ತು. ಬೃಹತ್ ಗಾತ್ರದ ಈ ಮರದ ಬೇರು ಮತ್ತು ಬುಡ ಕೊಳೆಯುತ್ತಿದ್ದ ಹಿನ್ನೆಲೆಯಲ್ಲಿ ಮರ ಎರಡು ಭಾಗವಾಗಿ ಬಿದ್ದಿದೆ. ಭಾರಿ ಗಾತ್ರದ ಕೊಂಬೆಗಳು 30ರಿಂದ 40 ಮೀಟರ್ ಪ್ರದೇಶಕ್ಕೆ ಮುರಿದು ಬಿದ್ದಿದೆ. ಕಾಲೇಜು ಸುತ್ತುಗೋಡೆ ಮತ್ತು ಕಾಲೇಜು ಮುಂಭಾಗದ ರಸ್ತೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ಪರಿವರ್ತಕಗಳ ಮೇಲೆ ರೆಂಬೆಗಳು ಬಿದ್ದು ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಮರದ ಕೆಳಗೆ ನಗರಸಭೆ ವತಿಯಿಂದ ನಿರ್ಮಾಣ ಮಾಡಿದ್ದ ವಾಕಿಂಗ್ ಪಾತ್ ಕೂಡ ಹಾನಿಗೊಳಗಾಗಿದೆ.
ವಿಚಾರ ತಿಳಿದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವಿಶ್ರಾಂತಿಗಾಗಿ ಆಶ್ರಯಿಸಿದ್ದ ಮರ: ಬೃಹದಾಕಾರದ ಈ ಮರವು ಸಾರ್ವಜನಿಕರಿಗೆ ನೆರಳಿನ ಸೌಕರ್ಯ ನೀಡುತ್ತಿತ್ತು. ಬೆಳಗಿನ ಜಾವ ಹಾಗೂ ಸಂಜೆ ಸಮಯದಲ್ಲಿ ವಾಯು ವಿಹಾರಿಗಳ ಹಾಟ್ ಸ್ಪಾಟ್ ಇದಾಗಿತ್ತು. ವ್ಯಾಯಾಮ ಮಾಡಿ ಜನರು ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದರು. ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಬಿರು ಬೇಸಿಗೆಯ ಝಳಕ್ಕೆ ಬೇಸತ್ತ ಜನರು ಆಲದ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ದೀಪಾವಳಿ ಅಮಾವಾಸ್ಯೆ ಸಮಯದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಹಿಂದಿರುಗಿ ಊರಿನತ್ತ ತೆರಳುವ ಮುನ್ನ ಆಲದ ಮರದ ಕೆಳಗೆ ತಂಗುತ್ತಿದ್ದನ್ನು ಸ್ಮರಿಸಬಹುದು.
ಒಂದೆರಡು ತಲೆಮಾರು ನೋಡಿರುವ ಈ ಮರವು ಇದ್ದಕ್ಕಿದ್ದಂತೆ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಪರಿಸರ ಪ್ರೇಮಿಗಳು, ಸಾರ್ವಜನಿಕರು ಮರ ವೀಕ್ಷಿಸಲು ಬೆಳಗಿನಿಂದ ಸಂಜೆವರೆವಿಗೂ ಭೇಟಿ ನೀಡಿದರು. ಎಲ್ಲರಿಗೂ ನೆರಳು ನೀಡಿದ್ದ ಮರದ ನೆನಪುಗಳನ್ನು ಮೆಲುಕು ಹಾಕುತ್ತ ಮರುಗಿದರು.
ತಡರಾತ್ರಿ ಮರ ಬಿದ್ದಿದ್ದರಿಂದ ಅನಾಹುತ ತಪ್ಪಿದಂತಾಗಿದೆ. ಮೈದಾನಕ್ಕೆ ಬೆಳಗ್ಗೆ ಮತ್ತು ಸಂಜೆ ಬರುವ ವಾಯುವಿಹಾರಿಗಳು ಆಲದ ಮರದ ಪಕ್ಕದಲ್ಲಿರುವ ಅರಳಿ ಮರದ ಕೆಳಗೆ ವ್ಯಾಯಾಮ ಮಾಡುವುದರ ಜತೆಗೆ ಕಾಲ ಕಳೆಯುತ್ತಾರೆ. ಮರದ ಕೆಳಗೆಯೇ ವಾಕಿಂಗ್ ಪಾತ್ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿಯೇ ಮರದ ಕೆಳಗೆ ಕಾಲ ಕಳೆಯುತ್ತಾರೆ. ಅದೃಷ್ಟವಶಾತ್ ಜನರು ಮೈದಾನಕ್ಕೆ ಬರುವ ಸಂದರ್ಭದಲ್ಲಿ ಮರ ಬಿದ್ದಿಲ್ಲ. ಇದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net