ಯುಗಾಧಿ ಜಾತ್ರೆಯ ಹಿನ್ನೆಲೆ ಬೆಂಗಳೂರು ಗಡಿ ಭಾಗದಲ್ಲಿನ ತಮಿಳುನಾಡಿನ ಡೆಂಕಣಿ ಕೋಟೆ, ಕೃಷ್ಣಗಿರಿ ಹಾಗೂ ಇನ್ನಿತರೆ ಕಡೆಗಳಿಂದ ಸಾವಿರಾರು ಭಕ್ತರು ಕಳೆದ 2 ದಿನದಿಂದ ತಾಲೂಕಿನ ದಂಟಳ್ಳಿ ಸಮೀಪದ ಕಾವೇರಿ ನದಿಯನ್ನು ತೆಪ್ಪದ ಮೂಲಕ ದಾಟಿ ಕಾಲ್ನಡಿಗೆಯಲ್ಲಿ ಮ.ಬೆಟ್ಟಕ್ಕೆ ತೆರಳುತ್ತಿದ್ದು, ಸೋಮವಾರವೂ ಮುಂದುವರಿದಿತ್ತು. ಭಕ್ತರ ಸುರಕ್ಷತೆಯ ದೃಷ್ಠಿಯಿಂದ ಅರಣ್ಯ ಪ್ರದೇಶದಿಂದ ಈ ಮಾರ್ಗದಲ್ಲಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ಬೆಳಗ್ಗೆ ಈ ಮಾರ್ಗದಲ್ಲಿ ಮರಿ ಆನೆ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ರಸ್ತೆ ಬದಿಯ ಅರಣ್ಯದಂಚಿನಲ್ಲಿ ನಿಂತಿದ್ದವು. ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರ ವಹಿಸಿದರು. ಭಕ್ತರಿಗೆ ಕೆಲಕಾಲ ತೆರಳದಂತೆ ಸೂಚನೆ ನೀಡಿದರು. ಬಳಿಕ ಕಾಡಾನೆಗಳ ಹಿಂಡು ರಸ್ತೆಯನ್ನು ದಾಟಿದ ಬಳಿಕ ಭಕ್ತರು ನಿಟ್ಟುಸಿರು ಬಿಟ್ಟು ಕಾಲ್ನಡಿಗೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಿದರು. ಇದರ ದೃಶ್ಯವನ್ನು ಭಕ್ತರೊಬ್ಬರೂ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ.