ಹನೂರು: ಸಮಾಜದಲ್ಲಿ ಅಸ್ಪಶ್ಯತೆಯನ್ನು ಹೊಗಲಾಡಿಸುವಲ್ಲಿ ಹಾಗೂ ರೈತರು ಸ್ವಾವಲಂಬಿಯಾಗಲು ಡಾ. ಬಾಬು ಜಗಜೀವನರಾಮ್ ಅವರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ಕೆ.ಎನ್ ಚೈತ್ರಾ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಮ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಾಬೂಜಿ ಅವರ ಕಾಲ ಘಟ್ಟದಲ್ಲಿ ಸಮಾಜದಲ್ಲಿ ಸ್ಪಶ್ಯತೆ ಹಾಗೂ ಅಸಮಾನತೆ ತಾಂಡವಾಡುತ್ತಿತ್ತು. ಇವರು ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೋರಾಟ ನಡೆಸುವುದರ ಮೂಲಕ ಉತ್ತಮ ಸಮಾಜಕ್ಕೆ ಶ್ರಮಿಸಿದರು. ಇವರು ಉತ್ತಮ ಕಾರ್ಯ ವೈಖರಿಯಿಂದ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದರು. ಮುರಾರ್ಜಿ ದೇಸಾಯಿ ಆಡಳಿತದಲ್ಲಿ ಉಪ ಪ್ರಧಾನಿಯಾಗಿದ್ದರು. ನೆಹರೂ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಕೃಷಿ, ಕೈಗಾರಿಕೆ, ರಕ್ಷಣೆ ಹಾಗೂ ಇತರೆ ಖಾತೆಯ ಸಚಿವರಾಗಿ ದೇಶದ ಅಭಿವೃದ್ಧಿಯಲ್ಲಿ ದೂರದೃಷ್ಟಿ ಹೊಂದಿದ್ದರು. ಆಹಾರ ಉತ್ಪಾದನೆಯಲ್ಲಿ ಕ್ರಾಂತಿ ಮೂಡಿಸಿ ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ. ಇವರ ಕಾರ್ಯ ವೈಖರಿ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.
ಮಾದಾರ ಮಹಾಸಭಾದ ತಾಲೂಕು ಅಧ್ಯಕ್ಷ ಸುದೇಶ್ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ರಮೇಶ್, ಮಹಾಸಭಾದ ಪ್ರಧಾನ ಕಾರ್ಯದರ್ಶಿ ರವಿ, ಮುಖಂಡರಾದ ಗುರುಸ್ವಾಮಿ, ಮಹದೇವ, ಗಣೇಶ್ ಇನ್ನಿತರರಿದ್ದರು.