ಗುಂಡ್ಲುಪೇಟೆ: ದಾರಿತಪ್ಪಿ ಕಾಡಿನಿಂದ ಹೊರಬಂದ ಕಡವೆಯೊಂದು ಮಂಗಳವಾರ ತಾಲೂಕಿನ ಬೊಮ್ಮಲಾಪುರ ಗ್ರಾಮದ ಮನೆಯೊಳಗೆ ನುಗ್ಗಿ ಕೆಲಕಾಲ ಆತಂಕ ಮೂಡಿಸಿತು.
ಕಡವೆಯನ್ನು ಬೀದಿನಾಯಿಗಳು ಬೆನ್ನಟ್ಟಿದ್ದರಿಂದ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದ ಅವರ ಮನೆಯೊಳಗೆ ನುಗ್ಗಿದೆ. ನಾಯಿಗಳಿಂದ ಕಡವೆಯನ್ನು ರಕ್ಷಿಸಿದ ಮನೆಯವರು ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದರು. ವಿಷಯ ತಿಳಿದ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಗಳವರು ತಮ್ಮ ಮೊಬೈಲ್‌ಗಳಲ್ಲಿ ಕಡವೆಯನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಬಫರ್ ವಲಯದ ಅಧಿಕಾರಿ, ಸಿಬ್ಬಂದಿ ಕಡವೆಯನ್ನು ಹಿಡಿದು ಜೀಪಿನಲ್ಲಿ ಕೊಂಡೊಯ್ದರು. ಕಡವೆ ಆರೋಗ್ಯವಾಗಿದ್ದರಿಂದ ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಬಿಡಲಾಗಿದೆ ಎಂದು ಬಫರ್ ವಲಯದ ಪ್ರಭಾರ ವಲಯಾರಣ್ಯಾಧಿಕಾರಿ ಶಿವಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.