ಶೀಘ್ರದಲ್ಲೇ ಸಮಗ್ರ ಪರಿಶೀಲನಾ ವರದಿ ಸಲ್ಲಿಕೆ

ಶ್ರೀಮಲೆ ಮಹೇಶ್ವರ ಬೆಟ್ಟದ ದೇವಸ್ಥಾನ
ಶ್ರೀಮಲೆ ಮಹೇಶ್ವರ ಬೆಟ್ಟದ ದೇವಸ್ಥಾನ
Published on

ಪ್ರಮುಖ ಮುಖ್ಯಾಂಶಗಳು

  • ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ದೂರುಗಳು ಸಲ್ಲಿಕೆ
  • ಡಿಸಿ ತನಿಖಾ ರಚನೆ ಮಾಡಿದ್ದ ತನಿಖಾ ತಂಡದಿಂದ ವರದಿ ತಯಾರಿ
ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ರಚನೆ ಮಾಡಿದ್ದ ಅಧಿಕಾರಿಗಳ ತನಿಖಾ ತಂಡ ಕೆಲವೇ ದಿನಗಳಲ್ಲಿ ವರದಿ ಸಲ್ಲಿಕೆ ಮಾಡಲಿದೆ.
ಪ್ರಾಧಿಕಾರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳು, ಇತರೆ ವೆಚ್ಚಗಳಲ್ಲಿ ಹಣ ದುರುಪಯೋಗ ಉಂಟಾಗಿದೆ ಎಂದು ದೂರುಗಳು ಸ್ವೀಕೃತವಾಗುತ್ತಿರುವುದರಿಂದ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಡಿಸಿ ಶ್ರೀರೂಪಾ ಜೂ.10ರಂದು ಅಧಿಕಾರಿಗಳ ತಂಡವನ್ನು ರಚನೆ ಮಾಡಿದ್ದರು.
ಕೊಳ್ಳೇಗಾಲದ ಉಪ ವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿ ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಉಪ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶಧ ಯೋಜನಾ ನಿರ್ದೇಶಕರು, ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರನ್ನೊಳಗೊಂಡ ತಂಡ ಜೂ.18ರೊಳಗೆ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಆದರೆ ವರದಿ ಸಲ್ಲಿಕೆ ವಿಳಂಬವಾಗಿದ್ದು, ಇನ್ನೆರಡು ದಿನಗಳಲ್ಲಿ ವರದಿ ಡಿಸಿ ಕೈಸೇರಲಿದೆ ಎಂದು ತಿಳಿದುಬರಲಿದೆ.
ಸೇವೆಯಿಂದ ಹಿಂಪಡೆಯಲು ಪತ್ರ:
ದೂರುಗಳ ಕುರಿತು ಹೆಚ್ಚಿನ ತನಿಖೆ ನಡೆಸುವ ಅಗತ್ಯವಿರುವುದರಿಂದ ಸಾರ್ವಜನಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಅವರನ್ನು ಸೇವೆಯಿಂದ ಹಿಂಪಡೆಯಬೇಕೆಂದು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರು ಮತ್ತು ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಶ್ರೀರೂಪಾ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜೂ.10ರಂದು ಪತ್ರ ಬರೆದಿರುವ ಡಿಸಿ ಶ್ರೀರೂಪಾ, ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳು ಮತ್ತು ಇತರೆ ವೆಚ್ಚಗಳಲ್ಲಿ ಹಣ ದುರುಪಯೋಗ ಉಂಟಾಗಿದೆ, ಸಮಿತಿ ಅನುಮೋದನೆ ಪಡೆಯದೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಂಡು ನಿಯಮ ಬಾಹಿರವಾಗಿ ವೇತನ ಪಾವತಿ ಮಾಡುತ್ತಿರುವ ಬಗ್ಗೆ, ಪ್ರಾಧಿಕಾರದ ನಡವಳಿ ಉಲ್ಲಂಸಿ ಹೊಸ ನಂದಿನಿ ಹಾಲಿನ ಕೇಂದ್ರ ಸ್ಥಾಪಿಸಲು ಅನುಮತಿ ನೀಡಿರುವ ಕುರಿತು ಕಾರ್ಯದರ್ಶಿ ರಘು ವಿರುದ್ಧ ಸಾರ್ವಜನಿಕರಿಂದ ಹಲವು ದೂರುಗಳು ಸ್ವೀಕೃತವಾಗಿವೆ ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಮತ್ತು ಹನೂರು ಶಾಸಕರು ಪ್ರಾಧಿಕಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಸೌಕರ್ಯಗಳ ಕೊರತೆ ಬಗ್ಗೆ ಜನರು ದೂರುಗಳನ್ನು ನೀಡಿದ್ದು, ಈ ಸಂಬಂಧ ಸಮಸ್ಯೆ ಪರಿಹರಿಸಲು ಕರೆ ಮಾಡಿದಾಗ ಶಾಸಕರ ಕರೆಯನ್ನೂ ಸ್ವೀಕಾರ ಮಾಡದೆ ಇರುವುದು, ಸಂಸದ ಸುನೀಲ್ ಬೋಸ್ ಹಲವು ಬಾರಿ ದೂರವಾಣಿ ಕರೆಗಳನ್ನು ಮಾಡಿದರೂ ಸಹ ಕರೆ ಸ್ವೀಕರಿಸುವುದಿಲ್ಲ. ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಇರುವುದಿಲ್ಲ. ಕಚೇರಿಯಲ್ಲಿ ಸರಿಯಾಗಿ ಲಭ್ಯವಿರುವುದಿಲ್ಲ. ಇದರಿಂದ ಪ್ರಾಧಿಕಾರದಲ್ಲಿ ಲೋಪಗಳು ಉಂಟಾಗಲು ಕಾರಣವೆಂದು ಕ್ರಮವಹಿಸಲು ತಿಳಿಸಲಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಎಡಿಸಿ ವರದಿ ಸಲ್ಲಿಕೆ
ಪ್ರಾಧಿಕಾರದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಛತಾ ಸಿಬ್ಬಂದಿ ನೇಮಕಾತಿ ಸಂಬಂಧ ಸಲ್ಲಿಕೆಯಾಗಿರುವ ದೂರುಗಳ ಪರಿಶೀಲನೆಗಾಗಿ ಹಾಗೂ ಆಡಳಿತ ಪ್ರಕ್ರಿಯೆ, ಆಯವ್ಯಯದ ಬಗ್ಗೆ ಪರಿಶೀಲನೆ ನಡೆಸಲು ಅಪರ ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದ್ದು, ಇದರ ಪರಿಶೀಲನಾ ವರದಿ ಸ್ವೀಕೃತಿಯಾಗಿದೆ ಎಂದು ಡಿಸಿ ಶ್ರೀರೂಪಾ ಪತ್ರದಲ್ಲಿ ಸರ್ಕಾರಕ್ಕೆ ತಿಳಿಸಿದ್ದಾರೆ.
ಜೂ.2ರಂದು ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪ್ರಾಧಿಕಾರಕ್ಕೆ 374 ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಅನುಮೋದನೆಯಾಗಿದ್ದು, ಪ್ರಾಧಿಕಾರದಲ್ಲಿ ಹೆಚ್ಚುವರಿಯಾಗಿ 18 ಹುದ್ದೆಗಳಿಗೆ ನೇಮಕ ಮಾಡಲಾಗಿದೆ. 18 ಹುದ್ದೆಗಳಿಗೆ ಪ್ರಾಧಿಕಾರದಿಂದ ಅನುಮೋದನೆ ಪಡೆದು ನೇಮಕಾತಿ ಮಾಡಿಕೊಂಡಿಲ್ಲ. ಕಾಯಂ ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರು ಸೇರಿ ಒಟ್ಟು 152 ಸಿಬ್ಬಂದಿಗೆ ವೇತನ ಪಾವತಿ ಮಾಡಲಾಗುತ್ತಿದೆ. ಪ್ರಾಧಿಕಾರದಲ್ಲಿ 138 ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವುದು, 14 ಜನ ಹೊರಗುತ್ತಿಗೆ ಸಿಬ್ಬಂದಿಗೆ ಹೆಚ್ಚುವರಿಯಾಗಿ ವೇತನ ಪಾವತಿಸುತ್ತಿರುವುದು ಕಂಡುಬಂದಿದೆ. ಪ್ರಾಧಿಕಾರದ ಆವರಣ ಮತ್ತು ಇತರೆ ಕಡೆಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದಿದೆ. ದಾಸೋಹ ಭವನದಲ್ಲಿ ಪ್ರತಿ ದಿನ 30 ಗ್ಯಾಸ್ ಸಿಲಿಂಡರ್‌ಗಳು ಬಳಕೆಯಾಗುತ್ತಿರುವುದಾಗಿ ಬಿಲ್ ಪಾವತಿ ಮಾಡಲಾಗುತ್ತಿದೆ. ವಾಸ್ತವವಾಗಿ ಪ್ರತಿದಿನ ಅಷ್ಟು ಸಿಲಿಂಡರ್‌ಗಳನ್ನು ಬಳಕೆ ಮಾಡುತ್ತಿಲ್ಲವೆಂದು ಆರೋಪವಿದೆ. ನಾಗಮಲೆ ಭವನ, ಜೇನುಮಲೆ ಭವನ, ಗುರುದರ್ಶಿನಿ, ಗಿರಿದರ್ಶಿನಿ ಹಾಗೂ ಇನ್ನಿತರೆ ವಸತಿ ಗೃಹಗಳಲ್ಲಿ ಪ್ರತಿಯೊಂದು ಭವನದಲ್ಲಿಯೂ 10ರಿಂದ 12 ಕೊಠಡಿಗಳನ್ನು ಕಚೇರಿ ಆದೇಶವೆಂದು ಕಾಯ್ದಿರಿಸಿ ಶುಲ್ಕ ರಹಿತವಾಗಿ ಸಾರ್ವಜನಿಕರಿಗೆ ನೀಡಿರುವುದು ಕಂಡುಬಂದಿದೆ. ಇದರಿಂದ ಪ್ರಾಧಿಕಾರಕ್ಕೆ ಪ್ರತಿ ದಿನ ಸಂದಾಯವಾಗುವ ಬಾಡಿಗೆ ಮೊತ್ತ ನಷ್ಟ ಉಂಟಾಗುತ್ತಿದೆ. 2025-26ನೇ ಸಾಲಿನ ಆದಾಯ ಮತ್ತು ವೆಚ್ಚದ ವಿವರಗಳ ಪರಿಶೀಲನೆಯಂತೆ ಒಟ್ಟು ಆದಾಯ 1,17,65,99,238 ರೂ.ಹಾಗೂ ಒಟ್ಟು ವೆಚ್ಚ 1,64,89,95991 ರೂ.ಆಗಿದ್ದು, ಇದರ ಪರಿಣಾಮವಾಗಿ ಅಂದಾಜು 4,72,39,67,53 ರೂ.ವೆಚ್ಚವು ಆದಾಯಕ್ಕಿಂತ ಹೆಚ್ಚಾಗಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ ಎಂದು ಎಡಿಸಿ ತಂಡ ವರದಿ ನೀಡಿದೆ.
ಪ್ರಾಧಿಕಾರದ ವಿರುದ್ಧ ಸ್ವೀಕೃತವಾಗಿದ್ದ ದೂರುಗಳ ಸಮಗ್ರ ಪರಿಶೀಲನೆಗಾಗಿ ನೇಮಿಸಿದ್ದ ಅಧಿಕಾರಿಗಳ ತಂಡ ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಕೆ ಮಾಡಲಿದೆ. ತನಿಖೆಯ ಉದ್ದೇಶದಿಂದ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರನ್ನು ಸೇವೆಯಿಂದ ಹಿಂಪಡೆಯಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಆಯುಕ್ತರು ಮತ್ತು ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಾಗಿತ್ತು.
ಶ್ರೀರೂಪಾ, ಜಿಲ್ಲಾಧಿಕಾರಿ, ಚಾಮರಾಜನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net