ಬಿಳಿಗಿರಿರಂಗನಬೆಟ್ಟದಲ್ಲಿ ಬೆಂಕಿಗೆ 8 ಅಂಗಡಿಗಳು ಭಸ್ಮ

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ಬೆಳಗಿನ ಜಾವ ಇಲ್ಲಿನ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಅಂಗಡಿಗಳಿಗೆ ಬೆಂಕಿ ಬಿದ್ದಿರುವುದು.
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಶುಕ್ರವಾರ ಬೆಳಗಿನ ಜಾವ ಇಲ್ಲಿನ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಅಂಗಡಿಗಳಿಗೆ ಬೆಂಕಿ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಘಟನೆ
ಯಳಂದೂರು: ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಸರ್ಕಲ್‌ನಲ್ಲಿರುವ ಅಂಗಡಿಗಳ ಸಾಲಿನಲ್ಲಿ ಬೆಂಕಿ ಕಾಣಿಸಿಕೊಂಡು 8 ಅಂಗಡಿ ಮಳಿಗೆಗಳು ಸಂಪೂರ್ಣ ಸುಟ್ಟು ಹೋಗಿವೆ. 
ತೇರಿನ ಬೀದಿಗೆ ಹೊಂದಿಕೊಂಡತೆ ಇರುವ ಅಂಗಡಿಗಳ ಸಾಲಿನಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿ ಹೋಟೆಲ್, ಗೂಡಂಗಡಿಗಳಲ್ಲಿ ಪದಾರ್ಥಗಳನ್ನು ಇಟ್ಟುಕೊಂಡಿದ್ದ ಭಾಗ್ಯಮ್ಮ, ಎಲ್. ಸ್ವಾಮಿ, ಕಾರ್ತೀಕ್ ಪ್ರಿಯಂ, ಆರ್. ನಾಗೇಂದ್ರು, ಸುಮಾ ಶೇಷಾದ್ರಿ, ಜಡೇಮಾದ, ಎಲ್. ಗೋವಿಂದ, ಮೀನಾ ನಾಗೇಂದ್ರ ಅವರಿಗೆ ಸೇರಿರುವ ಅಂಗಡಿಗಳು ಬೆಂಕಿಗೆ ಸಿಲುಕಿ ಸುಟ್ಟು ಬೂದಿಯಾಗಿವೆ. 
ಬೆಂಕಿಯ ಬಿರುಸಿಗೆ ಇಲ್ಲಿದ್ದ ಮೂರು ಸಿಲಿಂಡರ್‌ಗಳು ಸ್ಫೋಟಗೊಂಡು ಎಲ್ಲ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆದರೆ ಇದು ಗುಡ್ಡಗಾಡು ಪ್ರದೇಶವಾದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬರುವುದು ತಡವಾಯಿತು. ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಅಷ್ಟೊತ್ತಿಗಾಗಲೇ ಅಂಗಡಿಗಳು ಸುಟ್ಟು ಕರಕಲಾಗಿದ್ದವು. ಈ ಸಮಯದಲ್ಲಿ ಇಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
16 ರಂದು ಸಂಕ್ರಾಂತಿ ಹಬ್ಬದ ಮಾರನೇ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಆಗ ಅಂಗಡಿಯವರಿಗೆ ಭರ್ಜರಿ ವ್ಯಾಪಾರವಾಗುತ್ತದೆ. ಆದರೆ ಜಾತ್ರೆಯ ಸನಿಹದಲ್ಲೇ ಇದಕ್ಕೆ ಬೆಂಕಿ ಬಿದ್ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟವರು ತನಿಖೆ ನಡೆಸಿ ಸೂಕ್ತ ಕ್ರಮ ವಹಿಸಬೇಕು, ಇವರು ಮತ್ತೆ ಅಂಗಡಿಗಳನ್ನು ನಿರ್ಮಿಸಿಕೊಳ್ಳಲು ಪರಿಹಾರ ನೀಡಬೇಕು ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ. 
ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ: ಸ್ಥಳಕ್ಕೆ ತಹಸೀಲ್ದಾರ್ ಎಸ್.ಎಲ್. ನಯನಾ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಬಿಂದ್ಯಾ, ಡಿವೈಎಸ್‌ಪಿ ಧರ್ಮೇಂದ್ರ, ಇಒ ಉಮೇಶ್, ಸಿಪಿಐ, ಸುಬ್ರಹ್ಮಣ್ಯ, ಪಿಎಸ್‌ಐ ಆಕಾಶ್, ದೇಗುಲದ ಇಒ ಸುರೇಶ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ರಾಮಚಂದ್ರು, ಜೆ. ಯೋಗೇಶ್, ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು, ಯರಿಯೂರು ಜಯಣ್ಣ, ಗ್ರಾಪಂ ಅಧ್ಯಕ್ಷ ಸಿ.ಡಿ.ಮಹದೇವ, ಪ್ರತೀಪ್‌ಕುಮಾರ್, ಶ್ರೀನಿವಾಸ್, ವೆಂಕಟೇಶ್ ಸೇರಿದಂತೆ ಅನೇಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net