50 ಗ್ರಾಮಗಳಲ್ಲಿ ಜೀವಜಲ ಕೊರತೆ

ನೀರಿನ ಅಭಾವ ಎದುರಿಸುತ್ತಿರುವ ಜನರು ಬಿಂದಿಗೆ ಹಿಡಿದು ಬೀದಿಗೆ ಇಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ
ನೀರಿನ ಅಭಾವ ಎದುರಿಸುತ್ತಿರುವ ಜನರು ಬಿಂದಿಗೆ ಹಿಡಿದು ಬೀದಿಗೆ ಇಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ
Published on
ಹನೂರು: ಸುಡುವ ಬಿಸಿಲಿನ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಜೀವಜಲದ ಸಮಸ್ಯೆ ತೀವ್ರವಾಗುತ್ತಿದೆ. ನೀರಿನ ಸಮಸ್ಯೆ ಎದುರಿಸುತ್ತಿದ್ದ 38 ಗ್ರಾಮಗಳ ಸಂಖ್ಯೆ ಇದೀಗ 50ರ ಗಡಿ ದಾಟಿದೆ. ನೀರೊದಗಿಸುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ.
ಜಿಲ್ಲೆಯಲ್ಲಿಯೇ ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಹನೂರು ತಾಲೂಕಿನಲ್ಲಿ 25 ಗ್ರಾಮ ಪಂಚಾಯಿತಿಗಳಿವೆ. ಮಳೆಯ ಕೊರತೆಯಿಂದ ಪ್ರತಿ ವರ್ಷ ಬೇಸಿಗೆಯ ಮುನ್ನವೇ ನೀರಿನ ಸಮಸ್ಯೆ ಎದುರಾಗುತ್ತಲೇ ಇದ್ದು, ಜನರು ನೀರಿಗಾಗಿ ಪಡುಬಾರದ ಕಷ್ಟವನ್ನು ಎದುರಿಸುತ್ತಿದ್ದಾರೆ. ಈ ವರ್ಷವೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಜನವರಿ ತಿಂಗಳಲ್ಲೇ 29 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಕಮಟ್ಟಿಗೆ ನೀರಿನ ಸಮಸ್ಯೆಯನ್ನು ನಿಭಾಯಿಸಿದ್ದರು. ಆದರೆ ಮಳೆ ಇಲ್ಲದ ಪರಿಣಾಮ ಬಿಸಿಲಿನ ಬೇಗೆಗೆ ಅಂತರ್ಜಲ ಮಟ್ಟ ಕ್ಷೀಣಿಸುವುದರತ್ತ ಸಾಗಿತು. ಪರಿಣಾಮ ಮಾರ್ಚ್ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಗಳ ಸಂಖ್ಯೆ 38ಕ್ಕೇ ಏರಿತು. ಇದೀಗ ಇದರ ಸಂಖ್ಯೆ 51ಕ್ಕೇರಿದೆ. ಇದರಿಂದ ತಾಲೂಕಿನಲ್ಲಿ ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ಜನರು ಬಿಂದಿಗೆ ಹಿಡಿದು ಬೀದಿಗೆ ಇಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ನೀರೊದಗಿಸುವುದು ತಲೆನೋವಾಗಿ ಪರಿಣಮಿಸಿದ್ದು, ಪರ್ಯಾಯ ವ್ಯವಸ್ಥೆಯತ್ತ ಗಮನ ಹರಿಸಿದ್ದಾರೆ.
ಸಮಸ್ಯೆ 51 ಗ್ರಾಮಗಳಿಗೆ ಏರಿಕೆ: ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಧ್ಯಾಹ್ನದ ಹೊತ್ತಿಗೆ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಇದರಿಂದ ಜನರು ಹೈರಾಣರಾಗಿರುವುದು ಒಂದೆಡೆಯಾದರೆ, ಸುಡುವ ಬಿಸಿಲಿಗೆ ಭೂಮಿ ಕಾದು ಅಂಜರ್ತಲ ಮಟ್ಟ ಕುಸಿಯುತ್ತಿದೆ. ಮಳೆ ಇಲ್ಲದ ಪರಿಣಾಮ ನೀರಿನ ಮೂಲಗಳು ಬತ್ತಿ ಹೋಗಿದೆ. ಇದು 16 ಗ್ರಾಪಂ ವ್ಯಾಪ್ತಿಯ 51 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣವಾಗಿದೆ.
ತಾಲೂಕಿನಲ್ಲಿ ಪ್ರಸ್ತುತ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು, ಮರೂರು, ದೊಡ್ಡಿಯೂರು, ಚಿಕ್ಕಮಾಲಾಪುರ ಗ್ರಾಪಂನ ಮಹಾಲಿಂಗನಕಟ್ಟೆ, ಸಿರಗೋಡು, ಸೂಳೇರಿಪಾಳ್ಯ ಗ್ರಾಪಂನ ಮಂಚಾಪುರ, ಕಾಂಚಳ್ಳಿ, ಪಚ್ಚೆದೊಡ್ಡಿ, ಹೂಗ್ಯಂ ಗ್ರಾಪಂನ ಕೂಡಲೂರು, ಕೊಟ್ಟಯ್ಯನಮೂಲೆ, ಜಲ್ಲಿಪಾಳ್ಯ, ಹೊಸಬೀದಿ, ಶಾಗ್ಯ ಗ್ರಾಪಂನ ವಿನಾಯಕನಗರ, ಲಾಸಾರ್‌ದೊಡ್ಡಿ, ಮರಿಯಮಂಗಲ, ನೇಕಾರರದೊಡ್ಡಿ, ಕುರಟ್ಟಿ ಹೊಸೂರು ಗ್ರಾಪಂನ ದಂಟಳ್ಳಿ, ಕಾಳಶೆಟ್ಟಿ ದೊಡ್ಡಿ, ಎಲ್‌ಪಿಎಸ್ ವಿಲೇಜ್, ಪಿ.ಜಿ ಪಾಳ್ಯ ಗ್ರಾಪಂನ ಜೋರೆದೊಡ್ಡಿ, ನಲ್ಲಿಮರದ ದೊಡ್ಡಿ, ಆದಿಜಾಂಬವರ ಬೀದಿ, ಉದ್ದಟ್ಟಿ, ಶೆಟ್ಟಳ್ಳಿ ಗ್ರಾಪಂನ ವಿ.ಎಸ್.ದೊಡ್ಡಿ, ಮೂಗೇಗೌಡನದೊಡ್ಡಿ, ಭದ್ರಯ್ಯನಹಳ್ಳಿ, ಮಲೆಮಹದೇಶ್ವರ ಬೆಟ್ಟ ಗ್ರಾಪಂನ ಕೊಕ್ಕಬರೆ, ತೋಕೆರೆ, ಮಾರ್ಟಳ್ಳಿ ಗ್ರಾಪಂನ ಏರಿಕಾಡು, ಕರಟ್ಟು ಕೋಯಿಲ್, ದೊರೆಸ್ವಾಮಿ ಮೇಡು, ಹುಚ್ಚಪ್ಪನ ದೊಡ್ಡಿ, ಸಂದನಪಾಳ್ಯ, ಕೊಂಬೈನಗರ, ಮಿಣ್ಯಂ ಗ್ರಾಪಂನ ಕರಿಬೇವಿನ ಕೋಬೆದೊಡ್ಡಿ, ಕೌದಳ್ಳಿ ಗ್ರಾಪಂನ ಎಂ.ಜಿ.ದೊಡ್ಡಿ, 2ನೇ ವಾರ್ಡ್, ಎಲ್ಲೇಮಾಳ ಗ್ರಾಪಂನ ಚಿಗತಾಪುರ, ಬಿ.ಎಂ.ಹಳ್ಳಿ, ಚಂಗವಾಡಿ, ಬೂದುಗುಪ್ಪೆ, ಕಾಗೇರಿದೊಡ್ಡಿ, ದಿನ್ನಳ್ಳಿ ಗ್ರಾಪಂನ ಮಾರಳ್ಳಿ, ಹುಣಸೆಮರದ ದೊಡ್ಡಿ, ರಾಮಾಪುರ ಗ್ರಾಪಂನ ಗೋಪಿಶೆಟ್ಟಿಯೂರು ಹಾಗೂ ಅಜ್ಜೀಪುರ ಗ್ರಾಪಂನ ದೊಮ್ಮನಗದ್ದೆ, ಜಿ.ಆರ್.ನಗರ, ವಡ್ಡರದೊಡ್ಡಿ ಗ್ರಾಮಗಳು ಪ್ರಸ್ತುತ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಾಗಿವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ 21 ಗ್ರಾಪಂನ 38 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net