ರಜೆ ಇದ್ದಾಗಲೇ ಕಾಮಗಾರಿ ಶುರುವಾದರೆ ದಾಖಲಾತಿ ಹೆಚ್ಚಳಕ್ಕೂ ಅನುಕೂಲ
ಚಾಮರಾಜನಗರ: ಸರ್ಕಾರಿ ಶಾಲೆಗಳು ಬಡವರು ಮತ್ತು ಮಧ್ಯಮ ವರ್ಗದ ಮಕ್ಕಳ ವಿದ್ಯಾಕೇಂದ್ರಗಳಾಗಿವೆ. ಪ್ರಸ್ತುತ ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ತರಗತಿಗಳನ್ನು ಕೆಡವಿ ಹೊಸ ಕಟ್ಟಡ ಅಥವಾ ರಿಪೇರಿ ಮಾಡಲು ಸಕಾಲವಾಗಿದೆ.
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಒಟ್ಟು 325 ತರಗತಿ ಕೊಠಡಿಗಳನ್ನು ಕೆಡವಬೇಕಾಗಿದೆ. ಜಿಲ್ಲಾ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಚಾಮರಾಜನಗರ ತಾಲೂಕಿನಲ್ಲಿ 146, ಗುಂಡ್ಲಪೇಟೆ ತಾಲೂಕಿನಲ್ಲಿ 84, ಹನೂರು ತಾಲೂಕಿನಲ್ಲಿ 47, ಕೊಳ್ಳೇಗಾಲ ತಾಲೂಕಿನಲ್ಲಿ 38, ಯಳಂದೂರು ತಾಲೂಕಿನಲ್ಲಿ 10 ತರಗತಿಗಳ ಕೊಠಡಿಗಳನ್ನು ಕೆಡವಬೇಕಾಗಿದೆ.
ಇನ್ನು 743 ತರಗತಿಗಳು ಅಂದರೆ, ಚಾಮರಾಜನಗರ-300, ಗುಂಡ್ಲಪೇಟೆ-208, ಹನೂರು- 146, ಕೊಳ್ಳೇಗಾಲ-78, ಯಳಂದೂರು-11 ತರಗತಿಗಳ ಕೊಠಡಿಗಳು ಪ್ರಮುಖವಾಗಿ ರಿಪೇರಿಯಲ್ಲಿವೆ. 775 ಕೊಠಡಿಗಳಲ್ಲಿ ಸಣ್ಣಪುಟ್ಟ ರಿಪೇರಿಗಳಿವೆ. ಉಳಿದಂತೆ 2597 ತರಗತಿ ಕೊಠಡಿಗಳು ಉತ್ತಮವಾಗಿವೆ.
ಗ್ರಾಮೀಣ ಪ್ರದೇಶದಿಂದ ಕೂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಅನಿವಾರ್ಯವಾಗಿವೆ. ಖಾಸಗಿ ಶಾಲೆಗಳ ಪೈಪೋಟಿ ನಡುವೆಯೂ ಸರ್ಕಾರಿ ಶಾಲೆಗಳ ಮೇಲೆ ಪಾಲಕರು ನಂಬಿಕೆ ಹೊಂದಿದ್ದಾರೆ. ಬೆಟ್ಟಗುಡ್ಡ, ಅರಣ್ಯದಂಚಿನ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳಿಲ್ಲದೆ ಇದ್ದಿದ್ದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿತ್ತು. ಈ ರೀತಿ ಸರ್ಕಾರಿ ಶಾಲೆಗಳು ಮಹತ್ವ ಪಡೆದುಕೊಂಡಿರುವ ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಕೊಠಡಿಗಳನ್ನು ರಿಪೇರಿ, ಪುನರ್ ನಿರ್ಮಾಣ ಮಾಡುವುದರಿಂದ ಉತ್ತಮ ಶೈಕ್ಷಣಿಕ ವಾತಾವರಣ, ಸೌಲಭ್ಯ ಒದಗಿಸಿದಂತಾಗುತ್ತದೆ.
ದಾಖಲಾತಿ ಹೆಚ್ಚಿಸಲು ಸಹಕಾರಿ:
ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ, ಕಟ್ಟಡ ನಿರ್ಮಾಣ ಮಾಡುವುದರಿಂದ ಮಕ್ಕಳ ದಾಖಲಾತಿ ಹೆಚ್ಚಳಕ್ಕೂ ಸಹಕಾರಿಯಾಗಲಿದೆ. ಪಾಲಕರಿಗೆ ಖಾಸಗಿ ಶಾಲೆಗಳ ಮೇಲಿರುವ ವ್ಯಾಮೋಹ, ಆ ಶಾಲೆಗಳಲ್ಲಿ ನೀಡುತ್ತಿರುವ ಸೌಲಭ್ಯಗಳು ಸರ್ಕಾರಿ ಶಾಲೆಗಳ ದಾಖಲಾತಿ ಮೇಲೆ ಪರಿಣಾಮ ಬೀರುತ್ತಿದೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದನ್ನು ಕಾಣಬಹುದಾಗಿದೆ. ಜಿಲ್ಲೆಯಲ್ಲಿ 2024-25ನೇ ಸಾಲಿಗೆ ಹೋಲಿಸಿದರೆ 1ರಿಂದ 10ನೇ ತರಗತಿವರೆಗೆ ಒಟ್ಟು 55078 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದರು. 2025-26ನೇ ಸಾಲಿನಲ್ಲಿ 1ರಿಂದ 10ನೇ ತರಗತಿವರೆಗೆ ಒಟ್ಟು 50897 ಮಕ್ಕಳು ದಾಖಲಾಗಿದ್ದರು. ಈ ಸಲ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳ ಮಾಡಲು ರಜೆ ಸಂದರ್ಭದಲ್ಲೇ ಶಾಲಾ ಕೊಠಡಿಗಳು, ಶೌಚಗೃಹಗಳ ರಿಪೇರಿ, ಪುನರ್ ನಿರ್ಮಾಣ ಮಾಡುವುದರ ಮೂಲಕ ಸಮರ್ಪಕವಾದ ಸೌಲಭ್ಯ ನೀಡಬಹುದಾಗಿದೆ.
ಸಾರ್ವಜನಿಕರ ಸಹಭಾಗಿತ್ವ:
ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಮಹತ್ವದ ಪಾತ್ರವಹಿಸಿದೆ. ಜಿಲ್ಲೆಯಲ್ಲಿ ಖಾಸಗಿ ಭೂಮಿಯನ್ನು ಸರ್ಕಾರಿ ಶಾಲೆಗಳಿಗಾಗಿಯೇ ಕೊಡುಗೆ ನೀಡಿರುವ ಹಲವು ಮಹನೀಯರು ಇದ್ದಾರೆ. ಇನ್ನು ಶಾಲೆಯ ಹಳೆಯ ವಿದ್ಯಾರ್ಥಿಗಳು ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದಾರೆ. ಗ್ರಾಮಸ್ಥರ ನೆರವಿನಿಂದಲೂ ಸರ್ಕಾರಿ ಶಾಲೆಗಳು ಸೌಲಭ್ಯವನ್ನು ಪಡೆದುಕೊಳ್ಳುತ್ತಿವೆ. ಈ ಸಹಭಾಗಿತ್ವದಿಂದ ಕೇವಲ ಶಾಲೆಯ ಭೌತಿಕ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ನಮ್ಮೂರ ಶಾಲೆ ಎಂಬ ಅಭಿಮಾನಕ್ಕೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿರುವವರೂ ಇದ್ದಾರೆ. ಹಾಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾಲೆಗಳು ಅಭಿವೃದ್ಧಿ ಹೊಂದುವುದು ಶಾಲಾ ದಾಖಾತಿಯನ್ನೂ ಹೆಚ್ಚು ಮಾಡುತ್ತದೆ.
ಜೀವಭಯದಿಂದ ಮುಕ್ತಗೊಳ್ಳಲಿ:
ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದು ಮಕ್ಕಳಿಗೆ ಜೀವಭಯದ ಆತಂಕವನ್ನು ಮೂಡಿಸುತ್ತಲೇ ಇವೆ. ಚಾಮರಾಜನಗರ ತಾಲೂಕಿನ ಕಾಳನಹುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೆಲವು ಕೊಠಡಿಗಳು ಶಿಥಿಲಗೊಂಡಿವೆ. ಕೊಠಡಿಗಳು ಬಳಕೆಗೆ ಯೋಗ್ಯವಿಲ್ಲವೆಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಮಕ್ಕಳನ್ನು ಶಾಲೆಯ ಆವರಣದಲ್ಲಿ ಕೂರಿಸಿ ಪಾಠ ಮಾಡಿದ ಉದಾಹರಣೆಗಳೂ ಇವೆ. ಇದು ಕೇವಲ ಒಂದು ಶಾಲೆಯ ಸ್ಥಿತಿಯಲ್ಲ. ತರಗತಿ ಕೊಠಡಿ ಶಿಥಿಲಗೊಂಡಿರುವ ಬಹುಪಾಲು ಶಾಲೆಗಳ ತರಗತಿಗಳಲ್ಲಿ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣವಿಲ್ಲ. ಶಿಕ್ಷಣ ಇಲಾಖೆ ಶಾಲೆಗೆ ರಜೆ ಇರುವಾಗಲೇ ತರಗತಿ ಕೊಠಡಿಗಳನ್ನು ರಿಪೇರಿ ಮಾಡಿಸುವ ಕಾರ್ಯ ಮಾಡಿಸುವುದು ಸೂಕ್ತ.
2597 ಕೊಠಡಿಗಳು ಉತ್ತಮ:
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಒಟ್ಟು 2597 ಕೊಠಡಿಗಳು ಉತ್ತಮವಾಗಿವೆ. ಚಾಮರಾಜನಗರ ತಾಲೂಕಿನಲ್ಲಿ 866, ಗುಂಡ್ಲುಪೇಟೆ ತಾಲೂಕಿನಲ್ಲಿ 552, ಹನೂರು ತಾಲೂಕಿನಲ್ಲಿ 468, ಕೊಳ್ಳೇಗಾಲ ತಾಲೂಕಿನಲ್ಲಿ 401, ಯಳಂದೂರು ತಾಲೂಕಿನಲ್ಲಿ 310 ಸರ್ಕಾರಿ ಶಾಲೆಗಳ ಕೊಠಡಿಗಳು ಉತ್ತಮ ಸ್ಥಿತಿಯಲ್ಲಿವೆ.
"
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ತರಗತಿ ಕೊಠಡಿಗಳ ನಿರ್ಮಾಣ ಮತ್ತು ರಿಪೇರಿಗಾಗಿ 1.86 ಕೋಟಿ ರೂ. ಅನುದಾನವಿದೆ. ಇದನ್ನು ಬಳಸಿಕೊಂಡು ಕೊಠಡಿಗಳ ದುರಸ್ಥಿ ಮಾಡಲಾಗುವುದು.
— ಚಂದ್ರಪಾಟೀಲ್, ಶಾಲಾ ಶಿಕ್ಷಣ ಇಲಾಖೆ(ಪ್ರೌಢಶಾಲೆ ವಿಭಾಗ), ಉಪನಿರ್ದೇಶಕ, ಚಾಮರಾಜನಗರ