ಕಿನಕಹಳ್ಳಿ-ಮಲ್ಲಿಗೆಹಳ್ಳಿ ಅಭಿವೃದ್ಧಿಗೆ 2.30 ಕೋಟಿ ಅನುದಾನ

ಯಳಂದೂರು ತಾಲೂಕಿನ ಕಿನಕಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಉಪಾದ್ಯಕ್ಷರಾದ ಸಿದ್ದರಾಜು, ಜೆ.ಯೋಗೇಶ್ ಸೇರಿದಂತೆ ಅನೇಕರು ಇದ್ದರು.
ಯಳಂದೂರು ತಾಲೂಕಿನ ಕಿನಕಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾನುವಾರ ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಉಪಾದ್ಯಕ್ಷರಾದ ಸಿದ್ದರಾಜು, ಜೆ.ಯೋಗೇಶ್ ಸೇರಿದಂತೆ ಅನೇಕರು ಇದ್ದರು.
Published on
ಯಳಂದೂರು: ಕಿನಕಹಳ್ಳಿ ಹಾಗೂ ಮಲ್ಲಿಗೆಹಳ್ಳಿ ಗ್ರಾಮದ ಉಪ್ಪಾರ, ಲಿಂಗಾಯತ, ಪರಿಶಿಷ್ಟ ಜಾತಿ ವರ್ಗಗಳ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಗಳಿಗೆ 2.30 ಕೋಟಿ ರೂ. ಹಣ ಬಿಡುಗಡೆಯಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಕಿನಕಹಳ್ಳಿ ಹಾಗೂ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಭಾನುವಾರ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಎರಡೂವರೇ ವರ್ಷಗಳ ನನ್ನ ಅವಧಿಯಲ್ಲಿ ಎಲ್ಲ ಸಮುದಾಯಗಳ ಅಭಿವೃದ್ಧಿಗೂ ಆದ್ಯತೆ ನೀಡಿದ್ದೇನೆ. ಎಲ್ಲ ಜನಾಂಗದ ಸಮುದಾಯ ಭವನಗಳು, ರಸ್ತೆ, ಚರಂಡಿ, ಆಸ್ಪತ್ರೆ, ಶಾಲೆಗಳು, ಅಗ್ನಿಶಾಮಕ ಠಾಣೆ, ಬಿಳಿಗಿರಿರಂಗನಬೆಟ್ಟದ ಅಭಿವೃದ್ಧಿ, ಬಸ್‌ನಿಲ್ದಾಣ, ಸೇತುವೆ ನಿರ್ಮಾಣ ಸೇರಿದಂತೆ ಇದೂವರೆಗೆ 500 ಕೋಟಿ ರೂ.ಗೂ ಹೆಚ್ಚು ಹಣವನ್ನು ನಾನು ಕ್ಷೇತ್ರಕ್ಕೆ ತಂದಿದ್ದೇನೆ. ಅನೇಕ ಶಾಶ್ವತ ಕಾಮಗಾರಿಗಳನ್ನು ಮಾಡುವುದು, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ನನ್ನ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಆದ್ಯತೆಗೆ ಅನುಗುಣವಾಗಿ ಪ್ರತಿ ಗ್ರಾಮದಲ್ಲೂ ನನಗೆ ನೀಡುವ ಮನವಿ ಪರಿಗಣಿಸಿ ಹಂತಹಂತದಲ್ಲಿ ಇದನ್ನೂ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ನೀರಿಗೆ ವಿರೋಧ: ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಕೈಗಾರಿಕೆಗಳಿಗೆ ತಾಲೂಕಿನ ಅಗರ ಹಾಗೂ ಮದ್ದೂರು ಕೆರೆಗಳಿಂದ 1,500 ಕೋಟಿ ರೂ. ವೆಚ್ಚದಲ್ಲಿ ನೀರನ್ನು ಪೂರೈಸುವ ಯೋಜನೆಗೆ ನನ್ನ ವಿರೋಧವಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ಗೆ ತಿಳಿಸಿದ್ದೇನೆ. ಇದನ್ನು ಮಾಡಬೇಕೆಂದರೆ ಮೊದಲು ಇಲ್ಲಿನ ರೈತರಿಗೆ ಅನುಕೂಲವಾಗುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ, ಸುವರ್ಣಾವತಿ ಹಾಗೂ ಚಿಕ್ಕಹೊಳೆ ಜಲಾಶಯಗಳಿಗೆ ನೀರು ತುಂಬಿಸಿ ಈ ನೀರನ್ನು ಸುವರ್ಣಾವತಿ ನದಿಗೆ ಹರಿಸಿ ಅಲ್ಲಿಂದ ನೀರನ್ನು ಪೂರೈಸಿಕೊಳ್ಳಿ ಎಂದು ನಾನು ಸಚಿವರಿಗೆ ಸಲಹೆ ನೀಡಿದ್ದೇನೆ. ಇದರಲ್ಲೂ ಕೂಡ ಈ ಭಾಗದ ರೈತರಿಗೆ ಅನುಕೂಲವಾಗಬೇಕು ಎಂಬುದು ನನ್ನ ಮನವಿಯಾಗಿದೆ. ಇದಕ್ಕೆ ಸಚಿವರು ಸೂಕ್ತವಾಗಿ ಸ್ಪಂದಿಸಿದ್ದು, ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಮಾತನಾಡಿ, ಶಾಸಕರು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಐದು ಗ್ಯಾರಂಟಿ ಯೋಜನೆಯ ನಡುವೆಯೂ ನೂರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಶಿಕ್ಷಣ, ಆರೋಗ್ಯ, ಮೂಲ ಸಮಸ್ಯೆಗಳ ನಿವಾರಣೆ, ರಸ್ತೆ ಸೇರಿದಂತೆ ಅನೇಕ ಪ್ರಗತಿಪರ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಜು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಕೆಆರ್‌ಐಡಿಎಲ್‌ನ ಚಿಕ್ಕಲಿಂಗಯ್ಯ, ಗುತ್ತಿಗೆದಾರ ಇರ್ಫಾನ್, ಸಿಪಿಐ ಸುಬ್ರಹ್ಮಣ್ಯ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net