ಹನೂರು ತಾಲೂಕಿನ ಜಿ.ಕೆ.ಹೊಸೂರು ಗ್ರಾಮದ ಶರಣ ದಂಪತಿ ಶ್ರೀಮತಿ ಪುಟ್ಟಮಾದಮ್ಮ ಮತ್ತು ಶ್ರೀರುದ್ರಪ್ಪ ಅವರ ಪುತ್ರರಾದ ಶ್ರೀಗುರುಸ್ವಾಮೀಜಿ ಅವರು 1956, ಆಗಸ್ಟ್ 2ರಂದು ಜನಿಸಿದ್ದರು. ಇವರು ಬಾಲ್ಯದಲ್ಲಿಯೇ ಶ್ರೀಸಾಲೂರು ಮಠಕ್ಕೆ ವಿದ್ಯಾರ್ಜನೆಗಾಗಿ ಸೇರಿ ಶ್ರೀಮಹದೇವ ಸ್ವಾಮೀಜಿ ಅವರ ಶಿಷ್ಯರಾಗಿ ಶ್ರೀಮಠದ ಕಾಯಕದಲ್ಲಿ ಸಂಪೂರ್ಣವಾಗಿ ತೊಡಗಿದರು. ಶ್ರೀಮಹದೇವ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಗುರು ಸ್ವಾಮೀಜಿ ಅವರು 1995, ಜ.29ರಂದು 18ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀಮಠ, ಮಾದಪ್ಪನ ದೇಗುಲ ಹಾಗೂ ಮ.ಬೆಟ್ಟದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಇವರ ಕಾಲದಲ್ಲಿ ಶ್ರೀಮಹದೇಶ್ವರಸ್ವಾಮಿ ದೇಗುಲದ ಏಳಂತಸ್ತಿನ ರಾಜಗೋಪುರ ನಿರ್ಮಾಣ, ಚಿಕ್ಕ ಕಲ್ಯಾಣಿ ಅಭಿವೃದ್ಧಿ, ಭಕ್ತರು ತಂಗಲು ರಂಗ ಮಂದಿರ ಹಾಗೂ ಇನ್ನಿತರೆ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಶ್ರೀಮಠದ ಏಳಿಗೆಗೆ ನಿರಂತರವಾಗಿ ಶ್ರಮಿಸಿದ ಶ್ರೀಗಳು ಮ.ಬೆಟ್ಟದ ತಪ್ಪಲಿನ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಭಿಕ್ಷೆ ಸಂಗ್ರಹಿಸಿ ದಾಸೋಹಕ್ಕೆ ವಿನಿಯೋಗಿಸುತ್ತಿದ್ದರು. ಆಗಮಿಸುವ ಭಕ್ತರನ್ನು ಬಡವ, ಶ್ರೀಮಂತರೆನ್ನದೇ ಸಮನಾಗಿ ಉಪಚರಿಸುತ್ತಿದ್ದರು. ಶ್ರೀಗಳ ಮಾರ್ಗದರ್ಶನದಲ್ಲಿ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದು, ಹಲವರು ಉನ್ನತ ಹುದ್ದೆಯಲ್ಲಿದ್ದಾರೆ. ಶ್ರೀಗಳು 2025, ಮೇ 20ರಂದು ಲಿಂಗೈಕ್ಯರಾದರು.