ಡಿಸಿ ಭರವಸೆಯಿಂದ 13 ದಿನಗಳ ಧರಣಿ ಅಂತ್ಯ

ಗುಂಡ್ಲುಪೇಟೆಯಲ್ಲಿ ಸಾಮೂಹಿಕ ನಾಯಕತ್ವ ರೈತ ಸಂಘಟನೆಯವರು ನಡೆಸುತ್ತಿದ್ದ ಧರಣಿ ಕೈ ಬಿಡುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಮನವಿ ಮಾಡಿದರು. ಹೊನ್ನೂರು ಪ್ರಕಾಶ್ ಇದ್ದರು.
ಗುಂಡ್ಲುಪೇಟೆಯಲ್ಲಿ ಸಾಮೂಹಿಕ ನಾಯಕತ್ವ ರೈತ ಸಂಘಟನೆಯವರು ನಡೆಸುತ್ತಿದ್ದ ಧರಣಿ ಕೈ ಬಿಡುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಮನವಿ ಮಾಡಿದರು. ಹೊನ್ನೂರು ಪ್ರಕಾಶ್ ಇದ್ದರು.
Published on
ಗುಂಡ್ಲುಪೇಟೆ : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 13 ದಿನಗಳಿಂದ ಧರಣಿ ನಡೆಸುತ್ತಿದ್ದ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಶ್ರೀರೂಪಾ ಅವರ ಭರವಸೆ ಹಿನ್ನೆಲೆಯಲ್ಲಿ ಭಾನುವಾರ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.
ಕೇರಳಕ್ಕೆ ಖನಿಜ ಸಂಪತ್ತು ಸಾಗಣೆಗೆ ತಡೆ, ಕೆರೆಗಳಿಗೆ ನೀರು ತುಂಬಿಸುವುದು, ಸಫಾರಿ ಸ್ಥಗಿತ, ಅಕ್ರಮ ಗಣಿಗಾರಿಕೆ, ಅಕ್ರಮ ರೆಸಾರ್ಟ್‌ಗಳನ್ನು ಬಂದ್ ಮಾಡಿಸುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.21ರಂದು ಗುಂಡ್ಲುಪೇಟೆಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಧರಣಿ ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಸ್ಥಳಕ್ಕಾಗಮಿಸಿ ಧರಣಿ ನಿರತರ ಸಮಸ್ಯೆ ಆಲಿಸಿದರು. ಮುಖ್ಯಮಂತ್ರಿಗಳು ಬಂದು ಹೋದ ನಂತರವೂ ವಡ್ಡಗೆರೆ ಭಾಗದ ಕೆರೆಗಳಿಗೆ ನೀರು ಹರಿಸುವುದನ್ನು ಮುಂದುವರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ನಿಯಮ ಮೀರಿ ನಡೆಸುತ್ತಿರುವ ಗಣಿಗಾರಿಕೆ ಬಂದ್ ಮಾಡಿಸುವಂತೆ ಗಣಿ ಇಲಾಖೆಯ ಉಪನಿರ್ದೇಶಕರಿಗೆ ಕರೆ ಮಾಡಿ ಸೂಚನೆ ನೀಡಿದರು. ಕೇರಳಕ್ಕೆ ಖನಿಜ ಸಂಪತ್ತು ಸಾಗಣೆ ಸಂಬಂಧ ಇಲಾಖೆ ನಿರ್ದೇಶಕರನ್ನು ಬರ ಮಾಡಿ ರೈತರೊಂದಿಗೆ ಚರ್ಚಿಸುವ ಅವಕಾಶ ಮಾಡಲಾಗುತ್ತದೆ. ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಅಕ್ರಮ ರೆಸಾರ್ಟ್‌ಗಳನ್ನು ಬಂದ್ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಸಫಾರಿ ಸ್ಥಗಿತದ ವಿಚಾರ ನ್ಯಾಯಾಲಯದಲ್ಲಿರುವ ಕಾರಣ ಪರಿಶೀಲಿಸುವ ಭರವಸೆ ನೀಡಿದರು.
ನಂತರ ಬಂಡೀಪುರ ಹುಲಿ ಯೋಜನೆ ವ್ಯಾಪ್ತಿಯ ವಿವಿಧ ಹುದ್ದೆಗಳಲ್ಲಿ ದೀರ್ಘ ಕಾಲದಿಂದ ಕೆಲಸ ನಿರ್ವಹಿಸುವ ಅಧಿಕಾರಿಗಳ ವರ್ಗ ಆಗಬೇಕು. ಇಲ್ಲವಾದಲ್ಲಿ ಗುಂಡ್ಲುಪೇಟೆಯಿಂದ ಬಂಡೀಪುರಕ್ಕೆ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೇಡಿಕೆಗಳ ಈಡೇರಿಕೆಗೆ ಕಾಲಾವಕಾಶ ನೀಡುವ ಮೂಲಕ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಗಿದೆ ಎಂದು ಹೊನ್ನೂರು ಪ್ರಕಾಶ್ ತಿಳಿಸಿದರು.
ಜಿ.ಪಂ ಸಿಇಒ ಮೋನಾರೋತ್, ಎಸ್ಪಿ ಮುತ್ತುರಾಜ್, ತಹಸೀಲ್ದಾರ್ ಎಂ.ಎಸ್.ತನ್ಮಯ್, ಡಿಎಸ್ಪಿ ಸ್ನೇಹರಾಜ್, ರೈತ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net